ಕೊಪ್ಪಳದಲ್ಲಿ ಗುರುವಾರ ಡಿಸಿ ನಲಿನ್​ ಅತುಲ್​ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಯಿತು. ಎಡಿಸಿ ಸಿದ್ರಾಮೇಶ್ವರ, ಜಂಟಿ ಕೃಷಿ ನಿರ್ದೇಶಕ ಟಿ.ಎಸ್​.ರುದ್ರೇಶಪ್ಪ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಫ್ಣಿ ಸಿ ಉಕ್ಕುಂದ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸುಧಾಕರ ಮಾನೆ ಇತರರಿದ್ದರು. 
ಜಿಲ್ಲೆ

ಹಾಲು ಉತ್ಪಾದನಾ ಪ್ರಮಾಣ ಹೆಚ್ಚಿಸಿ : ಡಿಸಿ ನಲಿನ್​ ಅತುಲ್​ ಸೂಚನೆ

Kopala - Raveendra V K

ಕೊಪ್ಪಳ: ಜಿಲ್ಲೆಯಲ್ಲಿ ಹೈನುಗಾರಿಕೆಗೆ ಪ್ರೋತ್ಸಾಹಿಸಿ, ಹಾಲು ಉತ್ಪಾದನಾ ಪ್ರಮಾಣ ಹೆಚ್ಚಳಕ್ಕೆ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ನಲಿನ್​ ಅತುಲ್​ ಸೂಚಿಸಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕೃಷಿ ಹಾಗೂ ಕೃಷಿ ಬಂಧಿತ ಇಲಾಖೆಗಳ ಉಪ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಜಾನುವಾರುಗಳಿಗೆ ಕಾಲಕ್ಕೆ ತಕ್ಕಂತೆ ಅಗತ್ಯ ಲಸಿಕೆ ಹಾಕಿಸಿ. 2030ರ ವೇಳೆಗೆ ಜಿಲ್ಲೆಯಲ್ಲಿ ಹಾಲಿನ ಉತ್ಪಾದನೆ 2.37 ಲಕ್ಷ ಲೀರ್ಟನಿಂದ 3.60 ಲಕ್ಷ ಲೀಟರ್​ ಗೆ ಹೆಚ್ಚಿಸಿ. ದೇಶಿಯ ಹಾಲು ಉತ್ಪಾದನೆಯಿಂದ ಹೆಚ್ಚುತ್ತಿರುವ ಹಾಲಿನ ಬೇಡಿಕೆ ಪೂರೈಸಲು ಕ್ರಮ ವಹಿಸಿ. ಹೈನುಗಾರಿಕೆ ಯೋಜನೆಯಡಿ ರೈತ ಮಹಿಳೆಯರಿಗೆ ಪ್ರೋತ್ಸಾಹಿಸುವ ಹಸು, ಎಮ್ಮೆ ಖರೀದಿಗಾಗಿ ಇರುವ ಸಹಾಯದನ ಸೌಲಭ್ಯವನ್ನು ಅರ್ಹ ಫಲಾನುಭವಿಗಳಿಗೆ ನೀಡಿ. ಇಲಾಖೆಗಳ ಸೌಲಭ್ಯಗಳನ್ನು ರೈತರಿಗೆ ಒದಗಿಸುವ ಮೂಲಕ ಹಾಲು ಉತ್ಪಾದನೆ ಮತ್ತು ರೈತರ ಆದಾಯ ದ್ವಿಗುಣಗೊಳಿಸಲು ಪ್ರಯತ್ನಿಸಬೇಕು. ಕೋಳಿ ಸಾಕಾಣೆ ಸೌಲಭ್ಯಗಳನ್ನು ರೈತರಿಗೆ ನೀಡಿ. ಜಿಲ್ಲೆಯಲ್ಲಿರುವ ಕೋಳಿ ಫಾರಂಗಳಲ್ಲಿ ಸ್ವಚ್ಛತೆ ಆರೋಗ್ಯ ಪಾಲನೆಗೆ ಸೂಕ್ತ ನಿರ್ದೇಶನ ನೀಡಿ ಎಂದು ಹೇಳಿದರು.

ಅಮೃತ ಸ್ವಾಭಿಮಾನಿ ಕುರಿಗಾಯಿ ಯೋಜನೆಯಡಿ ಸ್ವೀಕೃತವಾದ ಅರ್ಜಿಗಳಲ್ಲಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ನೀಡಿ. ಅರ್ಹ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಸದಸ್ಯರಿಗೆ ಆದ್ಯತೆ ನೀಡಿ. ಫಲಾನುಭವಿಗಳನ್ನು ನಿಯಮಾನುಸಾರ ಆಯ್ಕೆ ಸಮಿತಿಯ ಮೂಲಕವೇ ಮಾಡಿ. ಜಾನುವಾರು ಪ್ರಾಣ ಹಾನಿ ಪ್ರಕರಣಗಳಡಿ ಸಕಾಲಕ್ಕೆ ಪರಿಹಾರ ಒದಗಿಸಲು ಸೂಚಿಸಿದರು.

ಪಶು ಇಲಾಖೆ ಉಪನಿರ್ದೇಶಕ ಡಾ ಪಿ.ಎಂ.ಮಲ್ಲಯ್ಯ ಮಾತನಾಡಿ, ಜಿಲ್ಲೆಯಲ್ಲಿ 2,94,880 ದನ ಎಮ್ಮೆ ಮತ್ತು 7,97,945 ಕುರಿ ಮೇಕೆಗಳು ಇವೆ. 25,000 ಸಂಚಾರಿ ದನಗಳಿವೆ. 5 ಲಕ್ಷ ಸಂಚಾರಿ ಕುರಿ-ಮೇಕೆಗಳಿವೆ. ಹೈನುಗಾರಿಕೆ, ಕುರಿ ಸಾಕಣೆ ಮತ್ತು ಇತರ ಕಾರ್ಯಕ್ರಮದಡಿ ರೈತರಿಗೆ ಇಲಾಖೆಯ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಎಡಿಸಿ ಸಿದ್ರಾಮೇಶ್ವರ, ಜಂಟಿ ಕೃಷಿ ನಿರ್ದೇಶಕ ಟಿ.ಎಸ್​.ರುದ್ರೇಶಪ್ಪ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಫ್ಣಿ ಸಿ ಉಕ್ಕುಂದ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸುಧಾಕರ ಮಾನೆ ಇತರರಿದ್ದರು.