ಜಿಲ್ಲೆ

ತುಲನಾತ್ಮಕ ವರದಿ ಕೇಳಿದ ಡಿಸಿ

Kopala - Raveendra V K

ಕೊಪ್ಪಳ: ಜಿಲ್ಲೆಯ ಸರ್ಕಾರಿ ಪದವಿ, ಇಂಜಿನಿಯರಿಂಗ್​ ಹಾಗೂ ಡಿಪ್ಲೋಮಾ ಕಾಲೇಜುಗಳಿಗೆ ಪಠ್ಯ ಹಾಗೂ ಇತರ ಪುಸ್ತಕ ಖರೀದಿಗೆ ಸಂಬಂಧಿಸಿದಂತೆ ಎನ್​ಇಪಿ&ಎಸ್​ಇಪಿ ಕುರಿತು ತುಲನಾತ್ಮಕ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ನಲಿನ್​ ಅತುಲ್​ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಮೆಗಾ ಮ್ಯಾಕ್ರೋ ಯೋಜನೆಯಡಿ 1.5 ಕೋಟಿ ರೂ. ಮೊತ್ತದಲ್ಲಿ ಪುಸ್ತಕ ಖರೀದಿಗೆ ಟೆಂಡರ್​ ಕರೆಯಲಾಗಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಪಠ್ಯ ಅನುಸಾರ ಪುಸ್ತಕ ಖರೀದಿಗೆ ಟೆಂಡರ್​ ಕರೆಯಲಾಗಿದೆ. 2024&25ನೇ ಶೈಕ್ಷಣಿಕ ಸಾಲಿಗೆ ಸರ್ಕಾರ ರಾಜ್ಯ ಶಿಕ್ಷಣ ನೀತಿ ಜಾರಿಗೊಳಿಸಿದೆ. ಹೀಗಾಗಿ ಹೊಸ ನೀತಿ ಪಠ್ಯದಂತೆ ಪುಸ್ತಕ ಖರೀದಿಸುವಂತೆ ಲೀಡ್​ ಕಾಲೇಜು ಪ್ರಾಚಾರ್ಯರು ಪತ್ರ ಬರೆದಿದ್ದರು. ಇದರಿಂದ ಖರೀದಿ ಗೊಂದಲ ಮೂಡಿಸಿದೆ. ಎನ್​ಇಪಿಯಂತೆ ಪುಸ್ತಕ ಖರೀದಿಸಿದಲ್ಲಿ ವಿದ್ಯಾರ್ಥಿಗಳಿಗೆ ಉಪಯೋಗವಿಲ್ಲವೆನ್ನಲಾಗಿದೆ.

ಎನ್​ಇಪಿ ಹಾಗೂ ಎಸ್​ಇಪಿ ಪಠ್ಯದ ನಡುವಿನ ವ್ಯತ್ಯಾಸವೇನು ? ಬದಲಾವಣೆ ಅಗತ್ಯತೆ ಕುರಿತು ತುಲನಾತ್ಮಕ ವರದಿ ಸಲ್ಲಿಸುವಂತೆ ಡಿಸಿ ಪ್ರಾಚಾರ್ಯರಿಗೆ ಸೂಚಿಸಿದ್ದಾರೆ. ಈ ಸಂಬಂಧ ವೈಜ್ಞಾನಿಕ ವರದಿ ಸಲ್ಲಿಸುವಂತೆ ತಾಕೀತು ಮಾಡಿದ್ದಾರೆ. ವರದಿ ಪಡೆದು ಟೆಂಡರ್​ ಬದಲಾವಣೆ ಮಾಡುವ ಅಗತ್ಯತೆ ಕಂಡುಬಂದಲ್ಲಿ ರದ್ದುಪಡಿಸಲಾಗುವುದು. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಪುಸ್ತಕಗಳ ಖರೀದಿ ಪ್ರಕ್ರಿಯೆ ನಡೆಸಲು ಜಿಲ್ಲಾಡಳಿತ ಯೋಜಿಸಿದೆ. ಪಠ್ಯ ಪುಸ್ತಕ ಖರೀದಿಯಲ್ಲಿನ ಗೊಂದಲ ಕುರಿತು ವಿಜಯವಾಣಿ ಸೆ.3ರಂದು "ಪಠ್ಯಪುಸ್ತಕ ಖರೀದಿ ಗೊಂದಲ' ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.