ಕೊಪ್ಪಳ: ಕಾರಟಗಿ ತಾಲೂಕು ಬರಗೂರು ಗ್ರಾಮದ ದಲಿತ ಯುವಕ ದಾನಪ್ಪನನ್ನು ಹತ್ಯೆ ಮಾಡಿದವರಿಗೆ ಶಿಕ್ಷೆ ವಿಧಿಸಲು ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಪ್ರತಿಭಟನೆ ನಡೆಯಿತು.
ಯಲಬುರ್ಗಾ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ದಲಿತ ಯುವಕರಿಗೆ ಕ್ಷೌರ ಮಾಡಲು ನಿರಾಕರಿಸಿ ಹಲ್ಲೆ ನಡೆಸಲಾಗಿದೆ. ಇದರಿಂದ ಮನನೊಂದ ಯುವಕರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಗರದ ದಲಿತ ಮುಖಂಡ ಮಲ್ಲಿಕಾರ್ಜುನ ಪೂಜಾರ್‌ಗೆ ಪೊಲೀಸರು ವಿನಾ ಕಾರಣ ಧಮ್ಕಿ ಹಾಕುತ್ತಿದ್ದಾರೆ. ಜಿಲ್ಲೆಯಲ್ಲಿ ನಿರಂತರವಾಗಿ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಜಾತಿ ದೌರ್ಜನ್ಯಕ್ಕೆ ಬಲಿಯಾದ ದಾನಪ್ಪ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ದೌರ್ಜನ್ಯದ ನಡೆಸಿದವರ ಆಸ್ತಿ ಮುಟ್ಟುಗೋಲು ಹಾಕಿಕೊಂಡು ದಾನಪ್ಪ ಕುಟುಂಬಕ್ಕೆ ಪರಿಹಾರವಾಗಿ ನೀಡಬೇಕು. ಹೊಸಳ್ಳಿ ಗ್ರಾಮದಲ್ಲಿ ಜಾತಿ ನಿಂದನೆ ಮಾಡಿದವರನ್ನು ಶಿಕ್ಷಿಸಬೇಕು. ಆರೋಪಿಗಳಿಗೆ ಜಾಮೀನು ದೊರೆಯದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು. ಸಮಿತಿ ರಾಜ್ಯ ಅಧ್ಯಕ್ಷ ಪರಶುರಾಮ ನಾಯಕ್, ಪದಾಧಿಕಾರಿಗಳಾದ ಮಲ್ಲಿಕಾರ್ಜುನ ಪೂಜಾರ, ಗ್ಯಾನಪ್ಪ ಬಡಿಗೇರ, ಎಚ್.ರೇಣುಕಮ್ಮ, ಹನುಮಂತಪ್ಪ ಮ್ಯಾಗಳಮನಿ, ಯಲ್ಲಪ್ಪ ಹಳೆಮನೆ, ನಿಂಗಜ್ಜ ಶಹಾಪೂರ, ದ್ಯಾಮಣ್ಣ ಚಾಮಲಾಪುರ, ವಿಠ್ಠಪ್ಪ ಗೋರಂಟ್ಲಿ, ಬಸವರಾಜ ಶೀಲವಂತರ್, ಡಿ.ಎಚ್.ಪೂಜಾರ, ಮಹಾಂತೇಶ ಕೊತಬಾಳ ಹಾಗೂ ಇತರರಿದ್ದರು.