ಕೊಪ್ಪಳ: ಇಂದು ನಡೆವ ವಿಶ್ವಕಪ್ ಕ್ರಿಕೆಟ್ ಅಂತಿಮ ಹಣಾಹಣಿಗೆ ಇಡೀ ವಿಶ್ವವೇ ಸಜ್ಜಾಗಿದೆ. ಅಭಿಮಾನಿಗಳು ಪಂದ್ಯ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ ಕಾರಣ ಪಂದ್ಯ ವೀಕ್ಷಣೆಗೆ 90 ಕಿ.ಮೀ.ದೂರದಿಂದ ಅಭಿಮಾನಿಯೊಬ್ಬ ಕೊಪ್ಪಳಕ್ಕೆ ಆಗಮಿಸಿದ್ದಾನೆ !
ಹೌದು, ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮಧ್ಯಾಹ್ನ 2 ಗಂಟೆಗೆ ಪಂದ್ಯ ನಡೆಯಲಿದೆ. ವೀಕ್ಷಣೆಗೆ ಸರ್ಕಾರ ಕ್ರೀಡಾ ಇಲಾಖೆ ಮೂಲಕ ಸಾರ್ವಜನಿಕ ಮೈದಾನದಲ್ಲಿ ವ್ಯವಸ್ಥೆ ಮಾಡಿದೆ. ಕೊಪ್ಪಳದ ತಾಲೂಕು ಕ್ರೀಡಾಂಗಣದಲ್ಲಿ ಎಲ್ಇಡಿ ವ್ಯವಸ್ಥೆ ಕೈಗೊಳ್ಳಲಾಗಿದೆ.
ವಿಷಯ ತಿಳಿದು ಕುಷ್ಟಗಿ ತಾಲೂಕಿನ ಅಡವಿಬಾವಿ ಗ್ರಾಮದ ರಮೇಶ 90 ಕಿ.ಮೀ. ಪ್ರಯಾಣ ಬೆಳೆಸಿ ಕೊಪ್ಪಳಕ್ಕೆ ಆಗಮಿಸಿದ್ದಾನೆ. ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ ಇರುತ್ತದೆ.
ಅಲ್ಲದೇ ಸಂಬಂಧಿಯೊಬ್ಬರ ಮದುವೆ ಇದ್ದು, ಅದಕ್ಕೂ ಹೋಗಿಲ್ಲ. ಕ್ರಿಕೆಟ್ ಅಭಿಮಾನಿಯಾಗಿದ್ದು, ವರ್ಲ್ಡ್ ಕಪ್ ಸರಣಿ ಎಲ್ಲ ಪಂದ್ಯಗಳನ್ನು ವೀಕ್ಷಿಸಿದ್ದು, ಅಂತಿಮ ಪಂದ್ಯ ವೀಕ್ಷಿಸಲೇಬೇಕೆಂದು ಎಲ್ಲ ಕೆಲಸ ಬಿಟ್ಟು ಬಂದಿದ್ದಾನೆ.
ರಮೇಶ ಪೇಂಟರ್ ಆಗಿದ್ದು, ಬೆಳಗ್ಗೆಯೇ ಕ್ರೀಡಾಂಗಣ ತಲುಪಿದ್ದಾನೆ.