ಡಿಸಿ ಎಸ್.ವಿಕಾಸ್ ಕಿಶೋರ್ 
ಜಿಲ್ಲೆ

ಜಿಲ್ಲೆಯಲ್ಲಿ ಆಕ್ಸಿಜನ್ ಸಹಿತ ಬೆಡ್‌ಗಳು ಹೆಚ್ಚಳ ; ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಹೇಳಿಕೆ

Koppal

ಸಕಾಲಕ್ಕೆ ಚಿಕಿತ್ಸೆ ಪಡೆಯಲು ಮನವಿ

ಕೊಪ್ಪಳ: ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 90 ಆಕ್ಸಿಜನ್ ಸಹಿತ ಬೆಡ್‌ಗಳನ್ನು ಸಿದ್ಧಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್ ಹೇಳಿದರು.

ಉಸ್ತುವಾರಿ ಸಚಿವರ ಸಭೆಯಲ್ಲಿ ನಿರ್ಧರಿಸಿದಂತೆ ಮುನಿರಾಬಾದ್‌ನಲ್ಲಿ 20 ಹಾಗೂ ಗವಿಮಠದ ವೃದ್ಧಾಶ್ರಮದಲ್ಲಿ 70 ಆಕ್ಸಿಜನ್ ಸಹಿತ ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಹೆಚ್ಚುವರಿ 45 ಬೆಡ್‌ಗಳ ವ್ಯವಸ್ಥೆಗೆ ಅವಕಾಶವಿದೆ. ಕುಕನೂರು, ತಾವರಗೇರಾ, ಹನುಮಸಾಗರ ಹಾಗೂ ಶ್ರೀರಾಮನಗರದಲ್ಲಿ ತಲಾ 30 ಮತ್ತು ಯಲಬುರ್ಗಾದಲ್ಲಿ 20 ಬೆಡ್ ಹೆಚ್ಚಳಕ್ಕೆ ಯೋಜನೆ ರೂಪಿಸಲಾಗಿದೆ ಎಂದು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠ್ಠಿಯಲ್ಲಿ ತಿಳಿಸಿದರು.

ಸರ್ಕಾರ ಜಿಲ್ಲೆಗೆ 11 ಕಿಲೋ ಲೀಟರ್ ಆಕ್ಸಿಜನ್ ಪೂರೈಕೆ ಮಾಡುತ್ತಿದ್ದು, ಅದಕ್ಕೆ ತಕ್ಕಂತೆ ಬೆಡ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಹೆಚ್ಚುವರಿ ಬೆಡ್‌ಗಳನ್ನು ಸಿದ್ಧಪಡಿಸಿದರೆ ಅದಕ್ಕೆ ಪೂರಕವಾಗಿ ಆಕ್ಸಿಜನ್ ಬೇಕಾಗುತ್ತದೆ. ಜಿಲ್ಲೆಯ ಮೂರು ಆಕ್ಸಿಜನ್ ಪೂರೈಕೆದಾರರ ಪೈಕಿ ರುಕ್ಮಿಣಿ ಆಕ್ಸಿಜನ್ ಕಂಪನಿಯವರಿಗೆ ಲಿಕ್ವಿಡ್ ಆಕ್ಸಿಜನ್ ಆಮದು ಮಾಡಿಕೊಳ್ಳಲು ಸ್ವಂತ ಟ್ಯಾಂಕರ್ ಇಲ್ಲದಿರುವುದು ಸಮಸ್ಯೆಯಾಗಿದೆ. ಹೀಗಾಗಿ ರುಕ್ಮಿಣಿ ಕಂಪನಿಯಿಂದ ಆಕ್ಸಿಜನ್ ಪಡೆಯುವ ಆಸ್ಪತ್ರೆಗಳಿಗೆ ಅಲರ್ಟ್ ಆಗಿರಲು ಸೂಚಿಸಿದ್ದೇವೆ. ಆಕ್ಸಿಜನ್ ಖಾಲಿಯಾಗುವ ಮೊದಲೇ ತಿಳಿಸಿದಲ್ಲಿ ಬೇರೆಡೆಯಿಂದ ಪೂರೈಸಲಾಗುವುದು. ಆಕ್ಸಿಜನ್ ಕೊರತೆಯಾಗುವ ಸಂಭವ ಇದ್ದಲ್ಲಿ ರೋಗಿಗಳನ್ನು ಬೇರೆಡೆ ಸ್ಥಳಾಂತರಿಸಲು ತಯಾರಿ ಮಾಡಿಕೊಳ್ಳಲು ತಿಳಿಸಲಾಗಿದೆ.