ಕೊಪ್ಪಳ: ರಾಜ್ಯದಲ್ಲಿ ರಾಜಕೀಯ ಕಾರಣಕ್ಕಾಗಿ ಜಂಗೀ ಕುಸ್ತಿ ಹಿಡಿಯುವ ಕಾಂಗ್ರೆಸ್-ಬಿಜೆಪಿ ಕೊಪ್ಪಳದಲ್ಲಿ ಮೊದಲಿನಿಂದಲೂ ಹೊಂದಾಣಿಕೆ ರಾಜಕೀಯ ಮಾಡಿಕೊಂಡು ಬಂದಿವೆ. ಬುಧವಾರ ಇಲ್ಲಿನ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಕಣಕ್ಕಿಳಿದಾಗ್ಯೂ ಮೂವರು ಬಿಜೆಪಿ ಸದಸ್ಯರು ಕಾಂಗ್ರೆಸ್ ಬೆಂಬಲಿದ್ದಾರೆ. ಕಾಂಗ್ರೆಸ್ನ ಅಮ್ಜದ್ ಪಟೇಲ್ ಅಧ್ಯಕ್ಷರಾದರೆ, ಬಿಜೆಪಿ ಅಶ್ವಿನಿ ಗದುಗಿನ ಮಠ ಉಪಾಧ್ಯೆಯಾಗಿ ಚುನಾಯಿತರಾದರು. ಈ ಮೂಲಕ ರಾಜ್ಯದಲ್ಲಿ ಕುಸ್ತಿ, ಸ್ಥಳಿಯವಾಗಿ ಉಭಯ ಪಕ್ಷಗಳು ದೋಸ್ತಿ ಎಂಬುದಕ್ಕೆ ಕೊಪ್ಪಳ ಮತ್ತೊಮ್ಮೆ ಸಾಯಾಯಿತು.
31 ಸದಸ್ಯ ಬಲದ ನಗರಸಭೆಯಲ್ಲಿ ಇಬ್ಬರು ಸದಸ್ಯರು ರಾಜೀನಾಮೆ ನೀಡಿದ್ದು 29 ಸ್ಥಾನಕ್ಕೆ ಕುಸಿದಿದೆ. 14 ಕಾಂಗ್ರೆಸ್, 9 ಬಿಜೆಪಿ, 2 ಜೆಡಿಎಸ್, 4 ಪಕ್ಷೇತರರಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ 3ನೇ ವಾರ್ಡ್ನ ಅಮ್ಜದ್ ಪಟೇಲ್ ಅಧ್ಯಕ್ಷ ಸ್ಥಾನಕ್ಕೆ, 2ನೇ ವಾರ್ಡ್ನ ಬಿಜೆಪಿ ಸದಸ್ಯೆ ಅಶ್ವಿನಿ ಗದುಗಿನ ಮಠ ಕಾಂಗ್ರೆಸ್ ಪರವಾಗಿ ಉಪಾಧ್ಯೆ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಇತ್ತ ಬಿಜೆಪಿ, ತನ್ನ 9 ಸದಸ್ಯರಿಗೆ ವಿಪ್ ಜಾರಿಗೊಳಿಸಿ 16ನೇ ವಾರ್ಡ್ನ ಸೋಮಣ್ಣ ಹಳ್ಳಿ ಅಧ್ಯಕ್ಷ ಸ್ಥಾನಕ್ಕೆ ಹಾಗೂ 26ನೇ ವಾರ್ಡ್ನ ದೇವಕ್ಕ ಕಂದಾರಿ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು.
ಬಳಿಕ ನಡೆದ ಮತದಾನದಲ್ಲಿ ಕಾಂಗ್ರೆಸ್ ಪರವಾಗಿ 14 ಕಾಂಗ್ರೆಸ್, ಇಬ್ಬರು ಜೆಡಿಎಸ್, ನಾಲ್ವರು ಪಕ್ಷೇತರರು, ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾವೇಂದ್ರ ಹಿಟ್ನಾಳ ಬೆಂಬಲಿಸಿದರು. ಬಿಜೆಪಿ ಸದಸ್ಯರಾದ ಅಶ್ವಿನಿ ಗದುಗಿನ ಮಠ (2ನೇ ವಾರ್ಡ್), ಬಸಮ್ಮ ದಿವಟರ (9ನೇ ವಾರ್ಡ್), ಅನ್ನಪೂರ್ಣಮ್ಮ (30ನೇ ವಾರ್ಡ್) ವಿಪ್ ಉಲ್ಲಂಘಿಸಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಿದರು. ತಲಾ 25 ಮತಗಳನ್ನು ಪಡೆದು ಕಾಂಗ್ರೆಸ್ ಅಮ್ಜದ್ ಪಟೇಲ್ ಅಧ್ಯಕ್ಷರಾದರೆ, ಬಿಜೆಪಿ ಅಶ್ವಿನಿ ಗದುಗಿನ ಮಠ ಉಪಾಧ್ಯೆಯಾಗಿ ಆಯ್ಕೆಯಾದರು. 6 ಬಿಜೆಪಿ ಸದಸ್ಯರು ಹಾಗೂ ವಿಪ ಸದಸ್ಯೇ ಹೇಮಲತಾ ನಾಯಕ ಮತ ಸೇರಿ ತಲಾ 7 ಮತ ಪಡೆದ ಬಿಜೆಪಿಯ ಸೋಮಣ್ಣ ಹಳ್ಳಿ, ದೇವಕ್ಕ ಕಂದಾರಿ ಪರಾಭವಗೊಂಡರು.
ರಾಜ್ಯಮಟ್ಟದಲ್ಲಿ ಜೆಡಿಎಸ್ನೊಂದಿಗೆ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ವಿರುದ್ಧ ಗುಡುಗುವ ಬಿಜೆಪಿ ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ಹೊಂದಾಣಿಕೆ ರಾಜಕಾರಣಕ್ಕೆ ಬಲಿಯಾಗಿದೆ. ಮಿತ್ರ ಪಕ್ಷ ಜೆಡಿಎಸ್ನ ಇಬ್ಬರು ಹಾಗೂ ಬಿಜೆಪಿಯ ಮೂವರು ಸದಸ್ಯರೇ ಕಾಂಗ್ರೆಸ್ನೊಂದಿಗೆ ಕೈ ಜೋಡಿಸಿದ್ದು ಬಿಜೆಪಿ ಹೀನಾಯ ಸೋಲನುಭವಿಸುವಂತಾಗಿದೆ.