ಕೊಪ್ಪಳ: ಸಿಎಂ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಬಿಜೆಪಿ ಮಿತ್ರರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಈ ಬೆಳವಣಿಗೆ ಒಳ್ಳೆಯದಲ್ಲ. ಸಿಎಂ ಸಿದ್ದರಾಮಯ್ಯ ಶುದ್ಧ ಹಸ್ತರು. ಅವರು ಯಾವ ಕಡತಕ್ಕೂ ಸಹಿ ಹಾಕಿಲ್ಲ. ತಮ್ಮ ಜಮೀನಿಗೆ ಪರ್ಯಾಯವಾಗಿ 14 ಸೈಟ್ ನೀಡುವಂತೆ ಮನವಿಯನ್ನೂ ಸಲ್ಲಿಸಿಲ್ಲ. ಮೂಡಾದವರೇ ಕೊಟ್ಟಿದ್ದಾರೆ. ಇದೀಗ ಸಿದ್ದರಾಮಯ್ಯ ಭ್ರಷ್ಟಾಚಾರ ಎಸಗಿದ್ದಾರೆಂದು ಆರೋಪಿಸುತ್ತಿದ್ದಾರೆ. ರಾಜ್ಯಪಾಲರು ಕೇಂದ್ರದ ಕೈಗೊಂಬೆ. ಯಾರೋ ನೀಡಿದ ಅರ್ಜಿ ಮಾನ್ಯ ಮಾಡಿ ಪ್ರಾಸಿಕ್ಯೂಷನ್ಗೆ ಅನುಮತಿಸಿದ್ದಾರೆ. ಕೂಡಲೇ ರಾಷ್ಟ್ರಪತಿ ಅವರನ್ನು ವಾಪಸ್ ಕರೆಸಿಕೊಳ್ಳಬೇಕು. ನಾವು ಕಾನೂನು ಹೋರಾಟ ಮಾಡಿ ಗೆದ್ದೇ ಗೆಲ್ಲುತ್ತೇವೆ ಎಂದರು.
ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮಾತನಾಡಿ, ರಾಜೀನಾಮೆ ಕೊಡುವಂತ ತಪು$್ಪ ಸಿದ್ದರಾಮಯ್ಯ ಮಾಡಿಲ್ಲ. ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ನಿಯಮಾನುಸಾರ ತನಿಖೆಗೆ ಅನುಮತಿಸಲು ಬರುವುದಿಲ್ಲ. ಹೀಗಿದ್ದರೂ ಒತ್ತಡ ಹಾಕಿ ಪ್ರಾಸಿಕ್ಯೂಷನ್ಗೆ ಅವಕಾಶ ಮಾಡಿಕೊಟ್ಟಿದ್ದಾರೆ. ನಾವು ನ್ಯಾಯಾಲಯ ಮೆಟ್ಟಿಲೇರಿದ್ದು, ನಮಗೆ ಜಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತೊಪಡಿಸಿದರು.
ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಹಿಂದುಳಿದ ವರ್ಗದ ಸಿದ್ದರಾಮಯ್ಯ ಎರಡನೇ ಅವಧಿಗೆ ಸಿಎಂ ಆಗಿದ್ದನ್ನು ಬಿಜೆಪಿಗೆ ಸಹಿಸಲು ಆಗುತ್ತಿಲ್ಲ. ಮುಡಾದಲ್ಲಿ ಬಿಜೆಪಿಯವರೇ ಸೈಟ್ ನೀಡಿದ್ದಾರೆ. ಅಕ್ರಮವಾಗಿ ಭೂಮಿ ವಶಪಡಿಸಿಕೊಂಡ ಕ್ರಮವನ್ನು ನಮ್ಮ ಸರ್ಕಾರ ರದ್ದು ಮಾಡಿದೆ. ಬಿಜೆಪಿಯೇತರ ರಾಜ್ಯ ಸರ್ಕಾರಗಳನ್ನು ಗುರಿಯಾಗಿಸಿ ಕೇಂದ್ರ ಸರ್ಕಾರ ಅಸ್ಥಿರಗೊಳಿಸುವ ಕೆಲಸಕ್ಕೆ ಕೈ ಹಾಕಿದೆ ಎಂದು ಆರೋಪಿಸಿದರು.
ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿದರು. ಅಶೋಕ ವೃತ್ತದಿಂದ ಬಸವೇಶ್ವರ ವೃತ್ತವರೆಗೆ ಪ್ರತಿಭಟನಾ ಮೆರವಣಿಗೆ ಮಾಡಿದ ಕಾರ್ಯಕರ್ತರು ಬಿಜೆಪಿ ನಾಯಕರ ವಿರುದ್ಧ ಘೋಷಣೆ ಕೂಗಿದರು. ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಬಳಿಕ ಎಡಿಸಿ ಸಿದ್ರಾಮೇಶ್ವರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
ಮುನಿರಾಬಾದ್ ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ, ದೊಡ್ಡ ಬಸನಗೌಡ ಬಯ್ಯಾಪುರ, ಮಾಲತಿ ನಾಯಕ, ಕೃಷ್ಣಾ ಇಟ್ಟಂಗಿ, ರೆಡ್ಡಿ ಶ್ರೀನಿವಾಸ, ಜ್ಯೋತಿ ಗೊಂಡಬಾಳ, ಕಿಶೋರಿ ಬೂದನುರ, ಇಂದಿರಾ ಬಾವಿಕಟ್ಟಿ, ಶಾಂತಣ್ಣ ಮುದಗಲ್, ಮಲ್ಲು ಪೂಜಾರ ಸೇರಿ ನೂರಾರು ಕಾರ್ಯಕರ್ತರಿದ್ದರು.