ಜಿಲ್ಲೆ

ಸಿಎಂ ರಾಜೀನಾಮೆ ನೀಡುವ ಪ್ರಶ್ನೆ ಇಲ್ಲ, ಸಚಿವ ಶಿವರಾಜ ತಂಗಡಗಿ ಹೇಳಿಕೆ

ಕೊಪ್ಪಳ: ರಾಜ್ಯಪಾಲರು ಕೇಂದ್ರ, ಬಿಜೆಪಿ ಕೈಗೊಂಬೆ ಆಗಿದ್ದಾರೆ. ಸಂವಿಧಾನ ಕೊಲೆ ಮಾಡುತ್ತಿದ್ದಾರೆ. ಮೋದಿ, ಅಮಿತ್ ಷಾ ಸೇರಿ ಸರ್ಕಾರ ಅಸ್ಥಿರಗೊಳಿಸಲಾಗುತ್ತಿದೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಮುನಿರಾಬಾದ್ ನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ಸಿಎಂ ಯಾವ ತಪ್ಪು ಮಾಡಿಲ್ಲ. ಅವರ ಪತ್ನಿ ಹೆಸರಿನಲ್ಲಿ ಮುಡಾ ಸೈಟ್ ನೀಡಿದೆ. ಅದು ಅವರೇ ಮಾಡಿದ ಕಾನೂನು ಪ್ರಕಾರ ನೀಡಿದ್ದಾರೆ. ಶೇ.38 ರಷ್ಟು ಸೈಟ್ ಪಡೆದಿದ್ದಾರೆ. ಆದರೂ ದುರುದ್ದೇಶದಿಂದ ಪ್ರಾಷಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ. ನಾವು, ಪಕ್ಷ ಸಿಎಂ ಪರ ಇದ್ದೇವೆ. ಕಾನೂನು ಹೋರಾಟ ಮಾಡುತ್ತೇವೆ. ಗೆದ್ದೆ ಗೆಲ್ಲುತ್ತೇವೆ. ಸಿಎಂ ರಾಜೀನಾಮೆ ನೀಡುವ ಪ್ರಶ್ನೆ. ರಾಜಕೀಯ ಷಡ್ಯಂತ್ರಕ್ಕೆ ಮಣಿವ ಪ್ರಸಂಗ ಇಲ್ಲ. ನಾವೆಲ್ಲ ಆತಂಕಗೊಂಡಿಲ್ಲ. ನಾವೇನು ಮಾಡಿದ್ದೇವೆಂದು ರಾಜೀನಾಮೆ ಕೇಳುತ್ತಾರೆ ಎಂದು ಪ್ರಶ್ನಿಸಿದರು.

ಬಿಜೆಪಿಗರು ತಮ್ಮ ಅವಧಿಯಲ್ಲಿ ಎಷ್ಟೆಷ್ಟು ಹಗರಣ ಮಾಡಿದ್ದಾರೆ. ವಿಜಯೇಂದ್ರ ಬಗ್ಗೆ ಅವರದೇ ಶಾಸಕ ಬಸನಗೌಡ ಯತ್ನಾಳ ನಿತ್ಯ ಹೇಳುತ್ತಿದ್ದಾರೆ‌. ರಾಜ್ಯಪಾಲರು ತಮ್ಮ ಹುದ್ದೆಗೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ. ಅವರು ರಾಜ್ಯದಿಂದ ಹೋಗಬೇಕು ಎಂದರು.

ಅಬ್ರಹಾಂಗೆ ಸುಪ್ರೀಂ ಕೋರ್ಟ್ 20 ಕೋಟಿ ರೂ. ದಂಡ ಹಾಕಿದೆ. ಬೆಳಗ್ಗೆ ದೂರು ಬಂದಿದೆ. ಸಂಜೆ ವೇಳೆಗೆ ನೋಟಿಸ್ ನೀಡಿದ್ದಾರೆ. ಇದು ಸಂಪೂರ್ಣ ರಾಜಕೀಯ ಪ್ರೇರಿತ. ಸಿಎಂ ಕಾನೂನು ಪದವೀಧರರು. ಅವರಿಗೆ ಕಾನೂನು ಚೆನ್ನಾಗಿ ಗೊತ್ತಿದೆ. ಕಾನೂನು ತಜ್ಞರ ಸಲಹೆ ಪಡೆಯುತ್ತೇವೆ. ಮುಂದಿನ ನಡೆ ಅನುಸರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.