ಕೊಪ್ಪಳ: ಮುಡಾಕ್ಕೆ ನಮ್ಮ ಕುಟುಂಬದವರು ಯಾವ ಪತ್ರ ಬರೆದಿಲ್ಲ. ಅದೆಲ್ಲ ಸುಳ್ಳು. ಕುಮಾರಸ್ವಾಮಿ ಯಾವಾಗಲೂ ಹಿಟ್ ಆ್ಯಂಡ್ ರನ್ ವ್ಯಕ್ತಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ತಾಲೂಕಿನ ಬಸಾಪುರ ವಿಮಾನ ನಿಲ್ದಾಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ಯಾರನ್ನೇ ಆಗಲಿ ಬಂಧಿಸುವ ಪ್ರಸಂಗ ಬಂದರೆ ಖಂಡಿತ ಬಂಧಿಸಲಾಗುವುದು. ಅದರಲ್ಲಿ ಯಾವುದೇ ಮೂಲಾಜಿಲ್ಲ. ಸದ್ಯ ಅಂಥ ಪರಿಸ್ಥಿತಿ ಇಲ್ಲ. ಕೇಂದ್ರ ಸಚಿವ ಎಚ್.ಡಿ.ಕುಮಾರ ಸ್ವಾಮಿ ವಿರುದ್ಧ ಗಣಿ ಹಗರಣ ಆರೋಪ ಇದೆ. ಲೋಕಾಯುಕ್ತದವರು ಪ್ರಾಸಿಕ್ಯೂಷನ್ ಗೆ ಅನುಮತಿ ಕೇಳಿದ್ದಾರೆ. ಎರಡು ಬಾರಿ ಪತ್ರ ಬರೆದರೂ ಗೌರ್ನರ್ ನಿರ್ಲಕ್ಷಿಸಿದ್ದಾರೆ. ಆದರೆ, ನನ್ನ ವಿರುದ್ಧ ದೂರು ಬಂದ ತಕ್ಷಣ ನನಗೆ ಶೋಕಾಸ್ ನೋಟಿಸ್ ನೀಡಿದ್ದಾರೆ. ಇದು ತಾರತಮ್ಯ ಅಲ್ಲವಾ ಎಂದು ಪ್ರಶ್ನಸಿದರು.
ರಾಜ್ಯಪಾಲರು ತನಿಖೆಗೆ ಅನುಮತಿಸುತ್ತಾರೆಂದು ಕುಮಾರಸ್ವಾಮಿಗೆ ಭಯ ಇದೆ ಅನಿಸುತ್ತದೆ. ಅದಕ್ಕೆ ಸರ್ಕಾರ ತಮ್ಮನ್ನು ಬಂಧಿಸಲಿದೆ ಎಂದು ಹೆದರಿದ್ದಾರೆ. ಮುಡಾಕ್ಕೆ ನಮ್ಮ ಕುಟುಂಬದವರು ಯಾರೂ ಪತ್ರ ಬರೆದಿಲ್ಲ. ಅದೆಲ್ಲ ಸುಳ್ಳು. ಕುಮಾರಸ್ವಾಮಿ ಯಾವಾಗಲೂ ಹಿಟ್ ಆ್ಯಂಡ್ ರನ್ ಕೇಸ್. ಅವರು ಹೇಳಿದ್ದನ್ನು ಒಂದೂ ಮಾಡಿಲ್ಲ. ಈ ವಿಷಯದಲ್ಲೂ ಅಷ್ಟೇ. ನನ್ನ ಹತ್ತಿರ ಪೆನ್ ಡ್ರೈವ್ ಇದೆ ಎಂದು ತೆಗೆದು ತೆಗೆದು ತೋರಿಸಿದ್ದರು. ಒಂದಾದರೂ ಬಿಡುಗಡೆ ಮಾಡಿದ್ದಾರಾ ? ಎಂದು ಕುಟುಕಿದರು. ಅವರ ಆರೋಪಗಳಿಗೆಲ್ಲ ಉತ್ತರ ಕೊಡುವ ಅಗತ್ಯವಿಲ್ಲ ಎಂದರು.
ಬೆಂಬಲ ಬೆಲೆ ಯೋಜನೆಯಡಿ ಹೆಸರು ಖರೀದಿ ಸಂಬಂಧ ಕೇಂದ್ರಕ್ಕೆ ಪತ್ರಬರೆಯಲಾಗಿದೆ. ಅನುಮತಿ ಬಂದ ತಕ್ಷಣ ಖರೀದಿ ಪ್ರಕ್ರಿಯೆ ಆರಂಭಿಸಲಾಗುವುದು. ಅಭಿವೃದ್ಧಿ ವಿಷಯದಲ್ಲಿ ನಾನು ರಾಜಕಾರಣ ಮಾಡುವುದಿಲ್ಲ. ಕೊಪ್ಪಳ ಅಭಿವೃದ್ಧಿಗೆ ಬೇಕಾದ ಅನುದಾನ ಒದಗಿಸಲಾಗುವುದು ಎಂದರು.