ಕೊಪ್ಪಳ: ನಗರಸಭೆಗೆ ಸಂಬಂಧಿಸಿದ ವಿವಿಧ ಅಭಿವೃದ್ಧಿ ಕೆಲಸಗಳ ಕುರಿತು ಚರ್ಚಿಸಲು ಬಂದಿದ್ದ ನಗರಸಭೆ ಸದಸ್ಯರಿಗೆ ಕೊಠಡಿ ನೀಡದೆ ಅಗೌರವ ತೋರಿದ್ದನ್ನು ಖಂಡಿಸಿ ನಗರಸಭೆ ಮುಂಭಾಗದಲ್ಲಿ ಸದಸ್ಯರು ಬುಧವಾರ ದಿಢೀರ್ ಪ್ರತಿಭಟಿಸಿದರು.
ನಗರಸಭೆಗೆ ಚುನಾವಣೆ ಜರುಗಿ ಎರಡು ವರ್ಷ ಕಳೆದರೂ ಅಧ್ಯಕ್ಷರ ಮೀಸಲು ಪ್ರಕರಣ ಇತ್ಯರ್ಥವಾಗಿಲ್ಲ. ಹೀಗಾಗಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದರೂ ಫಲಿತಾಂಶ ಘೋಷಣೆಯಾಗಿಲ್ಲ. ಹೀಗಾಗಿ ಜಿಲ್ಲಾಧಿಕಾರಿ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಲು ಶಾಸಕ ರಾಘವೇಂದ್ರ ಹಿಟ್ನಾಳ್ ಸಭೆ ನಡೆಸುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸದಸ್ಯರು ನಗರಸಭೆಗೆ ಆಗಮಿಸಿದ್ದಾರೆ. ಸಭೆ ಕೊಠಡಿಗೆ ಬೀಗ ಹಾಕಿದ್ದರಿಂದ ತೆರೆಯುವಂತೆ ಮನವಿ ಮಾಡಿದರೂ, ಅಧಿಕಾರಿಗಳು ಸ್ಪಂದಿಸದ್ದರಿಂದ ಕಚೇರಿ ಮುಂಭಾಗದಲ್ಲಿ ಧರಣಿ ಕುಳಿತರು.
ಅಧಿಕಾರಿಗಳು ಸದಸ್ಯರಿಗೆ ಗೌರವ ನೀಡುತ್ತಿಲ್ಲ. ಯಾವೊಂದು ಕೆಲಸದ ಬಗ್ಗೆ ಕೇಳಿದರೂ ಉದಾಸೀನ ತೋರುತ್ತಾರೆ. ಕನಿಷ್ಠ ಸೌಜನ್ಯದಿಂದ ವರ್ತಿಸುವುದಿಲ್ಲವೆಂದು ಆರೋಪಿಸಿದರು. ಬಳಿಕ ಶಾಸಕ ರಾಘವೇಂದ್ರ ಹಿಟ್ನಾಳ್ ಸ್ಥಳಕ್ಕೆ ಆಗಮಿಸಿ, ವಿಷಯ ಆಲಿಸಿದರು. ಅಲ್ಲದೆ, ಸದಸ್ಯರೊಂದಿಗೆ ಗೌರವದಿಂದ ನಡೆದುಕೊಳ್ಳುವಂತೆ ಸೂಚಿಸಿದರು. ಬಳಿಕ ಸಭೆ ನಡೆಸಿ ವಿವಿಧ ಅಭಿವೃದ್ಧಿ ಕೆಲಸಗಳ ಕುರಿತು ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಪೌರಾಯುಕ್ತ ಟಿ.ಮಂಜುನಾಥ, ಸದಸ್ಯರಾದ ಅಕ್ಬರ್ ಪಾಷಾ, ವಿರೂಪಾಕ್ಷಪ್ಪ ಮೋರನಾಳ, ರಮೇಶ ಗಿಣಿಗೇರಿ, ಸರ್ವೇಶ್ ಬನ್ನಿಕೊಪ್ಪ, ಅಜಿಮ್ ಅತ್ತಾರ, ಅರುಣ ಅಪ್ಪುಶೆಟ್ಟಿ, ಚನ್ನಪ್ಪ ಕೋಟ್ಯಾಳ ಸೇರಿ ಇತರರಿದ್ದರು.