ಕೊಪ್ಪಳ: ತಾಲೂಕಿನ ಚುಕ್ಕನಕಲ್ ಕ್ರಾಸ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 63 ಹಾದು ಹೋಗಿದ್ದು, ಸೇತುವೆ ನಿರ್ಮಿಸದ ಕಾರಣ ನಿರಂತರ ಅಪಘಾತಗಳು ಸಂಭವಿಸುತ್ತಿವೆ. ಸೇತುವೆ ನಿರ್ಮಿಸುವವರೆಗೆ ಸಂಚಾರಕ್ಕೆ ಅವಕಾಶ ನೀಡುವುದಿಲ್ಲವೆಂದು ಸವಾರರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಡಿ.16ರಂದು ಸಂಭವಿಸಿದ ಅಪಘಾತದಲ್ಲಿ ಚುಕ್ಕನಕಲ್ ಗ್ರಾಮದ ಮಹೇಶ ಹರಿಜನ (39) ಮೃತಪಟ್ಟಿದ್ದಾನೆ. ಕಳೆದ 2ರಿಂದ 3 ತಿಂಗಳಲ್ಲಿ ಹಲವರು ಅಪಘಾತದಲ್ಲಿ ಮರಣ ಹೊಂದಿದ್ದಾರೆ. ಹೆದ್ದಾರಿ ಪ್ರಾಧಿಕಾರ ಸುಸಜ್ಜಿತ ರಸ್ತೆ ನಿರ್ಮಿಸುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ಬೈಪಾಸ್ ರಸ್ತೆ ಹಾಗೂ ಇತರ ಗ್ರಾಮಗಳ ಅಡ್ಡ ರಸ್ತೆಗೆ ಸೇತುವೆ ನಿರ್ಮಿಸುತ್ತಿಲ್ಲ. ಇದರಿಂದ ಅಪಘಾತಗಳು ಹೆಚ್ಚುತ್ತಿವೆ.
ಈ ಮಾರ್ಗವಾಗಿ ಮುದ್ದಾಬಳ್ಳಿ, ಹೊಸ ಗೊಂಡಬಾಳ, ಹಳೇ ಗೊಂಡಬಾಳ ಗ್ರಾಮಕ್ಕೆ ಹೋಗಬೇಕು. ಆದರ್ಶ ವಿದ್ಯಾಲಯ, ಆಶ್ರಮಕ್ಕೆ ತೆರಳಲು ಈ ರಸ್ತೆ ಬಳಸಬೇಕು. ನಿರಂತವಾಗಿ ಅಪಘಾತಗಳು ನಡೆದರೂ ಪ್ರಾಧಿಕಾರ ಎಚ್ಚೆತ್ತುಕೊಳ್ಳುತ್ತಿಲ್ಲವೆಂದು ಆರೋಪಿಸಿದರು. ರಸ್ತೆಗೆ ಅಡ್ಡಲಾಗಿ ಮುಳ್ಳಿನ ಕಂಟಿ ಹಾಕಿ ಪ್ರತಿಭಟನೆ ನಡೆಸಿದರು.
ಕೂಡಲೇ ಸೇತುವೆ ನಿರ್ಮಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಶಾಶ್ವತವಾಗಿ ಸಂಚಾರ ಬಂದ್ ಮಾಡುತ್ತೇವೆ ಎಂದು ಎಚ್ಚರಿಸಿದರು. ಎರಡು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆದ ಕಾರಣ ವಾಹನ ಸವಾರರು ಪರದಾಡಿದರು.