ಕೊಪ್ಪಳ: ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಹೆಚ್ಚುತ್ತಿದ್ದು, ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ ಎಂದು ಶಾಸಕ ರಾಘವೇಂದ್ರ ಹಿಟ್ನಾಳ್ ಆರೋಪಿಸಿದರು.
ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಿಸುವಲ್ಲಿ ವಿಫಲವಾಗಿದೆ. ಇದರಿಂದಾಗಿ ಜನರ ದಿಕ್ಕು ತಪ್ಪಿಸಲು ನಾಯಕತ್ವ ಬದಲಾವಣೆಯ ಪ್ರಹಸನ ನಡೆಸುತ್ತಿದ್ದಾರೆ. ಕರೊನಾ ತುರ್ತು ಪರಿಸ್ಥಿತಿ ನಿಭಾಯಿಸುವಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಫಲರಾಗಿದ್ದಾರೆ ಎಂದು ಬಿಜೆಪಿ ಶಾಸಕರೇ ನಮ್ಮ ಬಳಿ ಹೇಳುತ್ತಿದ್ದಾರೆ. ಯಡಿಯೂರಪ್ಪ ಅಧಿಕಾರದಲ್ಲಿದ್ದರೂ ಪ್ರಯೋಜನವಿಲ್ಲದಂತಾಗಿದೆ ಎಂದು ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಆರೋಪಿಸಿದರು.
ರಾಜಕೀಯ ಹಗ್ಗಜಗ್ಗಾಟದಲ್ಲಿ ರಾಜ್ಯದ ಜನರು ಕಷ್ಟಪಡುವಂತಾಗಿದೆ. ಸಿಎಂ ಬದಲಾವಣೆ ಬಿಜೆಪಿಯವರಿಗೆ ಬಿಟ್ಟ ವಿಚಾರವಾಗಿದೆ. ಆದರೆ, ಜನರಿಗೆ ಸೂಕ್ತ ಚಿಕಿತ್ಸೆ ಹಾಗೂ ಉತ್ತಮ ಆಡಳಿತ ನೀಡಿ ಎಂದು ಒತ್ತಾಯಿಸುವುದು ನಮ್ಮ ಕೆಲಸವಾಗಿದೆ. ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಔಷಧ ಇಲ್ಲ ಎಂದು ವೈದ್ಯರು ಹೇಳುತ್ತಿದ್ದಾರೆ. ಈಗ ಲಭ್ಯ ಇರುವ ಔಷಧಗಳು ಅಡ್ಡಪರಿಣಾಮ ಬೀರುತ್ತಿವೆ. ರೋಗ ದೃಢಪಟ್ಟ ನಂತರವೇ ಸರ್ಕಾರದಿಂದ ಔಷಧ ಕಳುಹಿಸಲಾಗುತ್ತಿದೆ. ಔಷಧ ಬರುವುದರೊಳಗೆ ಶಂಕಿತ ರೋಗಿಗಳು ಮೃತಪಟ್ಟರೆ ಯಾರು ಹೊಣೆ ಎಂದು ಶಾಸಕ ಹಿಟ್ನಾಳ್ ಪ್ರಶ್ನಿಸಿದರು.