ರೇಣುಕಾ 
ಜಿಲ್ಲೆ

ಗೃಹಿಣಿ ಸಾವು ಪತಿ ವಿರುದ್ಧ ದೂರು

ಕೊಪ್ಪಳ: ತಾಲೂಕಿನ ಭಾಗ್ಯನಗರದಲ್ಲಿ ಭಾನುವಾರ ತನ್ನ ಮಗಳನ್ನು ಆಕೆ ಪತಿ ಮತ್ತು ಕುಟುಂಬದವರು ಕೊಲೆ ಮಾಡಿದ್ದಾರೆಂದು ಐವರ ವಿರುದ್ಧ ಮೃತಳ ತಾಯಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ರೇಣುಕಾ (25) ಮೃತಳು. ಗದಗ ಜಿಲ್ಲೆಯ ತಿಮ್ಮಾಪುರದ ರೇಣುಕಾ ಮತ್ತು ಕುಕನೂರಿನ ಅನಿಲಕುಮಾರ ಸಂಗಟಿ ನಡುವೆ 2019ರಲ್ಲಿ ಮದುವೆ ನಡೆದಿತ್ತು. ಇತ್ತೀಚೆಗೆ ಗಂಡ ಹಾಗೂ ಆತನ ಕುಟುಂಬದವರೊಡನೆ ಭಾಗ್ಯನಗರದಲ್ಲಿ ವಾಸವಾಗಿದ್ದರು. ಅನಿಲಕುಮಾರ ಮದ್ಯ ವ್ಯಸನಿಯಾಗಿದ್ದು, ಪತ್ನಿ ಶೀಲ ಶಂಕಿಸಿ ಆಗಾಗ ಕಿರುಕುಳ, ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದ. ಈ ಬಗ್ಗೆ ಆಗಾಗ ರೇಣುಕಾ ತವರು ಮನೆಯವರೊಂದಿಗೆ ವಿಷಯ ಹಂಚಿಕೊಳ್ಳುತ್ತಿದ್ದರು. ಶನಿವಾರ ರಾತ್ರಿ ತವರು ಮನೆಯವರೊಂದಿಗೆ ವಾಟ್ಸಾಪ್ ಕಾಲ್ ಮಾಡಿ ಮಾತನಾಡಿದ್ದಾರೆ. ಆದರೆ, ಭಾನುವಾರ ಬೆಳಗ್ಗೆ ಅನಿಲಕುಮಾರ ಕರೆ ಮಾಡಿ ರೇಣುಕಾ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ತಿಳಿಸಿದ್ದಾನೆ.

ಕುಟುಂಬದವರು ಬಂದು ನೋಡಿದಾಗ ರೇಣುಕಾ ಶವ ಚಾಪೆ ಮೇಲಿದ್ದು, ಕುತ್ತಿಗೆ ಹಾಗೂ ದೇಹದ ಇತರ ಭಾಗದಲ್ಲಿ ಗಾಯದ ಕಲೆಗಳಿದ್ದವು. ಅನಿಲಕುಮಾರ ಹಾಗೂ ಅವರ ಕುಟುಂಬದವರು ಚಿತ್ರಹಿಂಸೆ ನೀಡಿ ನನ್ನ ಮಗಳನ್ನು ಕೊಲೆ ಮಾಡಿದ್ದಾರೆಂದು ರೇಣುಕಾ ತಾಯಿ ಹನುಮವ್ವ ದೂರು ನೀಡಿದ್ದಾರೆ. ಇದರ ಅನ್ವಯ ಅನಿಲಕುಮಾರ, ಈತನ ತಂದೆ ಸುಭಾಷಚಂದ್ರ, ತಾಯಿ ಶಶಿಕಲಾ, ಸಹೋದರ ಸುನಿಲಕುಮಾರ, ಸಹೋದರಿ ಗಾಯತ್ರಿ ವಿರುದ್ಧ ಪ್ರಕರಣ ಕೊಪ್ಪಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.