ದೇವೆಂದ್ರಗೌಡ ಕಡ್ಡಿಪುಡಿ. 
ಜಿಲ್ಲೆ

ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಘೋಷಿಸಿ

ಕೊಪ್ಪಳ: ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಘೋಷಿಸಬೇಕು. ಸರ್ಕಾರ ಈ ನಿಟ್ಟಿನಲ್ಲಿ ಚಿಂತನೆ ಮಾಡಬೇಕೆಂದು ಆಗ್ರಹಿಸಿ ಸೆ.8ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುವುದಾಗಿ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಅಧ್ಯಕ್ಷ ದೇವೆಂದ್ರಗೌಡ ಕಡ್ಡಿಪುಡಿ ಹೇಳಿದರು. ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ದೇಶದಲ್ಲಿ ಎಲ್ಲ ಕ್ಷೇತ್ರಗಳು ಗಣನೀಯವಾಗಿ ಅಭಿವೃದ್ಧಿಯಾಗಿದ್ದರೂ ಕೃಷಿ ರಂಗ ಹಾಗೇ ಉಳಿದಿದೆ. ಫಸಲಿಗೆ ಉತ್ತಮ ಬೆಲೆ ದೊರೆಯದೆ ರೈತರು ಕಂಗಾಲಾಗಿದ್ದಾರೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಇಲ್ಲವೇ ಕೃಷಿಯಿಂದ ವಿಮುಖರಾಗಿ ನಗರಗಳತ್ತ ಮುಖ ಮಾಡುತ್ತಿದ್ದಾರೆ. ಬೇರೆ ಉತ್ಪಾದಕ ವಲಯಗಳಲ್ಲಿ ಉತ್ಪಾದಕರೇ ಉತ್ಪನ್ನದ ದರ ನಿಗದಿ ಮಾಡುತ್ತಾರೆ. ರೈತರಿಗೆ ಮಾತ್ರ ಅದು ಸಾಧ್ಯವಾಗಿಸುವ ಅವಕಾಶ ದೊರೆಯುತ್ತಿಲ್ಲವೆಂದು ಹೇಳಿದರು.

ಬೆಂಬಲ ಬೆಲೆ ಘೋಷಣೆಯಿಂದ ರೈತರ ಆದಾಯ ದ್ವಿಗುಣಗೊಳಿಸಲು ಸಾಧ್ಯವಿಲ್ಲ. ಉತ್ಪಾದನಾ ವೆಚ್ಚ ಆಧರಿಸಿ ಲಾಭದಾಯಕ ಬೆಲೆ ನಿಗದಿಪಡಿಸುವುದರ ಜತೆಗೆ ಖರೀದಿಗೆ ಭರವಸೆ ನೀಡಬೇಕು ಎಂದು ಆಗ್ರಹಿಸಿದರು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಗೊಂದಿ, ಸಂಚಾಲಕ ರಾಯಪ್ಪ ಹುಯಿಲಗೋಳ ಇದ್ದರು.