ಮಂಡ್ಯ: ಚುನಾವಣೆ ಸಮಯದಲ್ಲಿ ನಿರುದ್ಯೋಗಿ ಪದವೀಧರರಿಗೆ ನಿರುದ್ಯೋಗ ಭತ್ಯೆ ನೀಡುವುದಾಗಿ ಹೇಳಿದ ಕಾಂಗ್ರೆಸ್, ಸರ್ಕಾರ ರಚನೆಯಾಗುತ್ತಿದ್ದಂತೆ ನಿಯಮ ವಿಧಿಸುವ ಮೂಲಕ ಯುವಜನರಿಗೆ ಟೋಪಿ ಹಾಕುತ್ತಿದೆ ಎಂದು ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಎಂ.ಪುಟ್ಟಮಾದು ಕಿಡಿಕಾರಿದರು.
ಮತಯಾಚನೆ ವೇಳೆ ಎಲ್ಲ ನಿರುದ್ಯೋಗಿಗಳಿಗೆ ಯುವನಿಧಿ ಕಾರ್ಯಕ್ರಮದಡಿ ನಿರುದ್ಯೋಗ ಭತ್ಯೆ ನೀಡುವುದಾಗಿ ಕಾಂಗ್ರೆಸ್ ಹೇಳಿತ್ತು. ಆದರೀಗ ಕೇವಲ 2022-23ನೇ ಸಾಲಿನಲ್ಲಿ ಉತ್ತೀರ್ಣರಾಗಿರುವ ನಿರುದ್ಯೋಗಿ ಯುವಜನರಿಗೆ ಗರಿಷ್ಟ 2 ವರ್ಷದವರೆಗೆ ಮಾತ್ರ ಭತ್ಯೆ ನೀಡುವುದಾಗಿ ನಿಯಮ ವಿಧಿಸಿರುವುದು ಸರಿಯಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಆಕ್ಷೇಪಿಸಿದರು.
ಕೇವಲ 2022-23ನೇ ಸಾಲಿನ ಪದವೀಧರರು ಮಾತ್ರ ನಿರುದ್ಯೋಗಿಗಳು. ಅದಕ್ಕೂ ಹಿಂದಿನ ವರ್ಷಗಳಲ್ಲಿ ಪದವಿ ಪಡೆದಿರುವವರು ಸರ್ಕಾರದ ಕಣ್ಣಿಗೆ ಕಾಣುತ್ತಿಲ್ಲವೇ?. ಈಗ ಬೇರೆ ರೀತಿ ಹೇಳುತ್ತಿರುವುದಾದರೂ ಏಕೆ?. ಕಾಂಗ್ರೆಸ್ ಸರ್ಕಾರಕ್ಕೆ ನಿಜವಾಗಿಯೂ ನಿರುದ್ಯೋಗಿ ಪದವೀಧರರ ಬಗ್ಗೆ ಕಾಳಜಿ, ಗೌರವವಿದ್ದರೆ ಕೊಟ್ಟ ಮಾತಿನಂತೆ ಎಲ್ಲ ಪದವೀಧರ ನಿರುದ್ಯೋಗಿಗಳಿಗೆ ಯುವನಿಧಿ ಸೌಲಭ್ಯ ದೊರಕಿಸಿಕೊಡಲಿ. ನಿಯಮ ಹಾಕುವ ಮೂಲಕ ಜನರಿಗೆ ಮೋಸ ಮಾಡಬಾರದು. ಭಾಗ್ಯಗಳ ಬದಲು ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕು. ಹಲವು ಭಾಗ್ಯಗಳನ್ನು ಘೋಷಣೆ ಮಾಡಿರುವ ಮೊದಲು ಉದ್ಯೋಗ ಸೃಷ್ಟಿಸಿ, ದುಡಿಯುವ ಕೈಗೆ ಕೆಲಸ ಕೊಡಲಿ. ಪದವೀಧರರು ಆರ್ಥಿಕವಾಗಿ ಸಬಲರಾಗುವ ನೀತಿಗಳನ್ನು ಜಾರಿಗೊಳಿಸಲಿ. ಇಲ್ಲದಿದ್ದರೆ ಈಗ ಬಿಜೆಪಿಗೆ ಆಗಿರುವ ಗತಿಯೇ ಮುಂದೆ ಕಾಂಗ್ರೆಸ್‌ಗೂ ಬರಲಿದೆ ಎಂದು ಎಚ್ಚರಿಸಿದರು.
ಅಧಿಕಾರ ಹಿಡಿದ ಸಂಭ್ರಮದಲ್ಲಿ ಜನರ ಕಷ್ಟ, ಸಂಕಟಗಳನ್ನು ಕಾಂಗ್ರೆಸ್ ಮರೆಯಬಾರದು. ಬೇಸಿಗೆಯ ಬಿಸಿಲಿಗೆ ಜನರು ಹೈರಾಣಾಗುತ್ತಿದ್ದಾರೆ. ಕುಡಿಯುವ ನೀರು, ಆಹಾರದ ಸಮಸ್ಯೆ ಎದುರಾಗುತ್ತಿದೆ. ಆದ್ದರಿಂದ ರಾಜ್ಯದಲ್ಲಿರುವ 1.80 ಕೋಟಿ ಕೃಷಿ ಕೂಲಿಕಾರರಿಗೆ ವಾರ್ಷಿಕ ಸರಾಸರಿ 80 ದಿನಗಳಷ್ಟೇ ಮನರೇಗಾ ಅಡಿಯಲ್ಲಿ ಕೆಲಸ ದೊರೆಯುತ್ತಿದೆ. ಆರ್ಥಿಕ, ಸಾಮಾಜಿಕವಾಗಿ ಕಡೆಗಣಿಸಲ್ಪಟ್ಟಿರುವ ಈ ಜನರನ್ನು ಮೇಲೆತ್ತಲು ಮನರೇಗಾ ಯೋಜನೆಯ ಕೂಲಿ ಮೊತ್ತವನ್ನು ದಿನಕ್ಕೆ 600 ರೂಗೆ ಹೆಚ್ಚಿಸಬೇಕು. ವಾರ್ಷಿಕ 200 ದಿನಗಳ ಕೆಲಸ ಕೊಡಬೇಕೆಂದು ಆಗ್ರಹಿಸಿದ ಅವರು, ಬೆಂಗಳೂರಿನ ಸಂಘದ ಕಚೇರಿಯಲ್ಲಿ ಜೂ.2 ಮತ್ತು 3ರಂದು ರಾಜ್ಯ ಸಮಿತಿ ಸಭೆ ಕರೆಯಲಾಗಿದೆ. ಸಂಘದ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಬಿ.ವೆಂಕಟೇಶ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಕೋಮುವಾದಿ ಬಿಜೆಪಿ ಸರ್ಕಾರವನ್ನು ತೊಲಗಿಸಲು ಸಂಘ ನಡೆಸಿದ ಆಂದೋಲನದ ವಿಮರ್ಶೆ ನಡೆಯಲಿದೆ ಎಂದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್, ಮಂಡ್ಯ ತಾಲೂಕು ಅಧ್ಯಕ್ಷ ಅಮಾಸಯ್ಯ, ಉಪಾಧ್ಯಕ್ಷ ಅಬ್ದುಲ್ಲಾ, ಸಹ ಕಾರ್ಯದರ್ಶಿ ಎಂ.ಎಸ್.ಸಂತೋಷ್ ಹಾಜರಿದ್ದರು.