ಕುಶಾಲನಗರ: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವೇಶ್ವರನಗರ ನಿವಾಸಿ ಕೆ.ಬಿ. ಶಂಶುದ್ದೀನ್ ಮನೆ ಗೋಡೆ ಕುಸಿದು ಹಾನಿ ವುಂಟಾಗಿದೆ. ಬುಧವಾರ ಮುಂಜಾನೆ ಗೋಡೆ ಕುಸಿದಿದ್ದು, ಮನೆಯಲ್ಲಿ ಏಕಾಂಗಿಯಾಗಿ ಮಲಗಿದ್ದ ಶಂಶುದ್ದೀನ್ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಳಗ್ಗೆ ೩.೪೦ರ ಹೊತ್ತಿಗೆ ಮನೆ ಮುಂಭಾಗದ ಗೋಡೆ ಕುಸಿದು ಹೊರಗೆ ನಿಲ್ಲಿಸಿದ್ದ ಮೋಟಾರ್ ಬೈಕ್ ಮೇಲೆ ಬಿದ್ದಿದೆ. ಈ ವೇಳೆ ಎಚ್ಚರ ಗೊಂಡ ಶುಂಶುದ್ದೀನ್ ಹೊರಗೆ ಧಾವಿಸಿ ಗಮನಿಸುವಷ್ಟರಲ್ಲಿ, ಉಳಿದರ್ಧ ಗೋಡೆ ಬೆಡ್ ಮೇಲೆ ಕುಸಿದುಬಿದ್ದಿದೆ. ಶಂಶುದ್ದೀನ್ ಬೆಡ್‌ನಿಂದ ತಕ್ಷಣ ಎದ್ದ ಹಿನ್ನೆಲೆಯಲ್ಲಿ ಭಾರೀ ಅಪಾಯ ತಪ್ಪಿದಂತಾಗಿದೆ.
ಕುಶಾಲನಗರ ತಹಸೀಲ್ದಾರ್ ಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್ ಕ್ಲಬ್ ತಲಾ ೧೦ ಸಾವಿರ ಮತ್ತು ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ೫ ಸಾವಿರ ರೂಪಾಯಿ ತಕ್ಷಣದ ಪರಿಹಾರ ನೀಡಿದೆ.
ಕುಶಾಲನಗರದ ಪತ್ರಕರ್ತರಾಗಿರುವ ಶಂಶುದ್ದೀನ್ ಕೂಡುಮಂಗಳೂರು ಗ್ರಾಪಂ ಸದಸ್ಯರು ಕೂಡ ಆಗಿದ್ದಾರೆ. ಪಂಚಾಯಿತಿ ಪ್ರತಿನಿಧಿಯ ಮನೆ ಕುಸಿದು ಅನಾಹುತವಾಗಿದ್ದರೂ, ಗ್ರಾಮ ಪಂಚಾಯಿತಿ ಅಧ್ಯಕ್ಷೆ, ಉಪಾಧ್ಯಕ್ಷರು ಸೇರಿದ್ದಂತೆ ಸದಸ್ಯರು, ಅಧಿಕಾರಿಗಳು ಭೇಟಿ ನೀಡದೆ ಅಸಡ್ಡೆ ತೋರಿದ್ದಾರೆ.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷೆ ಬಿ.ಆರ್. ಸವಿತಾ ರೈ, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್, ಪ್ರಧಾನ ಕಾರ್ಯದರ್ಶಿ ವನಿತಾ ಚಂದ್ರಮೋಹನ್, ಉಪಾಧ್ಯಕ್ಷ ನಾಗರಾಜ ಶೆಟ್ಟಿ, ಖಜಾಂಚಿ ಕುಡೆಕಲ್ ಗಣೇಶ್, ನಿರ್ದೇಶಕರಾದ ಶಿವರಾಜ್, ಮುಸ್ತಾಫ, ವಿನೋದ್, ಜಯಪ್ರಕಾಶ್, ಜಿಲ್ಲಾ ಸಂಘದ ಖಜಾಂಚಿ ಆನಂದ್ ಕೊಡಗು, ನಿರ್ದೇಶಕರಾದ ರಘು ಹೆಬ್ಬಾಲೆ, ಟಿ.ಆರ್. ಪ್ರಭುದೇವ್, ವೀರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರೆಜಿತ್ ಕುಮಾರ್ ಗುಹ್ಯ ಮತ್ತಿತರರು ಭೇಟಿ ನೀಡಿದರು.