ನರಗುಂದ: ಜಾನುವಾರು ಕದ್ದು ಹೈಟೆಕ್ ಹೈನುಗಾರಿಕೆ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ, ಆರು ಜಾನುವಾರುಗಳನ್ನು ವಶಕ್ಕೆ ಪಡೆದ ಘಟನೆ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಕೊಣ್ಣೂರ ತೆಗ್ಗಿನಕೇರಿ ಓಣೆಯ ವೀರನಗೌಡ ಪರ್ವತಗೌಡ ಪಾಟೀಲ (48) ಬಂಧಿತ ವ್ಯಕ್ತಿ.
ಮೂಲತಃ ನರಗುಂದ ತಾಲೂಕು ಕೊಣ್ಣೂರಿನ ಪ್ರತಿಷ್ಠಿತ ಕೃಷಿ ಮನೆತನದ ಹಿನ್ನೆಲೆ ಹೊಂದಿರುವ ವೀರನಗೌಡ ಕಳೆದ ಎರಡ್ಮೂರು ವರ್ಷಗಳಿಂದ ಕೊಣ್ಣೂರ, ವಾಸನ, ಕಪಲಿ, ಕಲ್ಲಾಪೂರ ಮುಂತಾದ ಗ್ರಾಮಗಳಲ್ಲಿ ಜಾನುವಾರು ಕಳ್ಳತನ ಮಾಡಿ ಕೊಣ್ಣೂರಿನ ತಮ್ಮ ಹೈಟೆಕ್ ಧನದ ಕೊಟ್ಟಿಗೆಯಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿ ಹೈನುಗಾರಿಕ ಮಾಡುತ್ತಿದ್ದ.
ಆರೋಪಿ ಸಿಕ್ಕಿ ಬಿದ್ದದ್ದು ಹೇಗೆ?: ತಾಲೂಕಿನ ವಾಸನ ಗ್ರಾಮದಲ್ಲಿ ಮಾರ್ಚ್ 8ರಂದು ಬಾಳಪ್ಪ ಪಕ್ಕೀರಪ್ಪ ಮಡಿವಾಳರ ಎಂಬುವರ ಆಕಳು ಕಳ್ಳತನವಾಗಿತ್ತು. ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದಕ್ಕೂ ಮುಂಚೆಯೇ ಕೊಣ್ಣೂರು ಸುತ್ತಮುತ್ತಲಿನ ವಿವಿಧ ಗ್ರಾಮಗಳಲ್ಲಿ ಹತ್ತಕ್ಕೂ ಅಧಿಕ ಜಾನುವಾರು ಕಳ್ಳತನವಾಗಿತ್ತು. ಈ ಕುರಿತು ವಿಜಯವಾಣಿ ವರದಿ ಪ್ರಕಟಿಸಿ ಪೊಲೀಸ್ ಇಲಾಖೆ ಗಮನವನ್ನೂ ಸೆಳೆದಿತ್ತು. ಪ್ರಕರಣ ದಾಖಲಿಸಿಕೊಂಡ ತಂಡ ರಚನೆ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 11ಕ್ಕೂ ಅಧಿಕ ಸಿಸಿಟಿವಿ ಕ್ಯಾಮರಾ ಪರಿಶೀಲನೆ ಮಾಡಿದ್ದರು. ಕೊನೆಗೆ ಆರೋಪಿಯ ಧನದ ಕೊಟ್ಟಿಗೆಗೆ ಅಳವಡಿಸಿದ್ದ ಸಿಸಿಟಿವಿ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ವಾಸನ ಗ್ರಾಮದಲ್ಲಿದ್ದ ಅ.19 ರಂದು ಆರೋಪಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ವಿಚಾರಣೆಯಲ್ಲಿ 11 ಜಾನುವಾರು ಕದ್ದಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. 5 ಆಕಳು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನುಳಿದ 6 ಜಾನುವಾರುಗಳನ್ನು ಮಾರಾಟ ಮಾಡಿದ್ದ ಆರೋಪಿಯಿಂದ 2.40 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ.