ಜಿಲ್ಲೆ

15ರಂದು ಕೊಂಕಣಿ ಸಿನಿಮಾ ಅಸ್ಮಿತಾಯ್ ತೆರೆಗೆ



ಮಂಗಳೂರು : ಕೊಂಕಣಿ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್ ನಿರ್ಮಾಣದ ಬಹು ನಿರೀಕ್ಷಿತ ಅಸ್ಮಿತಾಯ್ ಕೊಂಕಣಿ ಸಿನಿಮಾ ಸೆ.15 ರಂದು ದ.ಕ. ಹಾಗೂ ಉಡುಪಿ ಜಿಲ್ಲೆಯ ವಿವಿಧ ಚಿತ್ರ ಮಂದಿರದಲ್ಲಿ ತೆರೆ ಕಾಣಲಿದೆ.
ಸೆ.10 ರಂದು ಮಂಗಳೂರಿನ ಬಿಜೈ, ಪುತ್ತೂರು ಹಾಗೂ ಮಣಿಪಾಲದ ಭಾರತ್ ಸಿನೆಮಾದಲ್ಲಿ ಸಾಯಂಕಾಲ 4ಕ್ಕೆ
ಏಕ ಕಾಲದಲ್ಲಿ ಮೂರು ಪ್ರೀಮಿಯರ್ ಪ್ರದರ್ಶನ ನಡೆಯಲಿದೆ. ಮಂಗಳೂರಿನ ಪ್ರದರ್ಶನವನ್ನು ಗೋವಾದ ಶಾಸಕ ಮೈಕಲ್ ಲೋಬೊ- ಡಿಲಾಯ್ಲ ಲೋಬೊ ದಂಪತಿ ಉದ್ಘಾಟಿಸಲಿದ್ದಾರೆ.
ಕೊಂಕಣಿ ಜನರ ಅಸ್ಮಿತೆಯ ಹುಡುಕಾಟದ ಎಳೆಯೊಂದಿಗೆ ಸಾಗುವ ಕತೆಯು ಗೋವಾದಿಂದ ವಲಸೆ, ಕೊಂಕಣಿಯ ಶ್ರೀಮಂತ ಜನಪದ ಪರಂಪರೆಯ ದೃಶ್ಯ ವೈಭವವನ್ನು ನವಿರಾದ ಪ್ರೇಮಕತೆಯೊಂದಿಗೆ ತೋರಿಸುತ್ತದೆ. ಎರಿಕ್ ಒಝೇರಿಯೊ ಬರೆದ ಮೂಲಕತೆಗೆ ಜೊಯೆಲ್ ಪಿರೇರಾ ಚಿತ್ರಕತೆ ಮತ್ತು ಸಂಭಾಷಣೆ ರಚಿಸಿದ್ದಾರೆ. ಯುವ ನಿರ್ದೇಶಕ ವಿಲಾಸ್ ರತ್ನಾಕರ್ ಕ್ಷತ್ರಿಯ ನಿರ್ದೇಶನ ನೀಡಿದ್ದಾರೆ. ಬಾಲರಾಜ ಗೌಡ ಸುಂದರವಾಗಿ ಸೆರೆ ಹಿಡಿದ ಕರಾವಳಿ, ಮಲೆನಾಡು ಮತ್ತು ಗೋವಾದ ದೃಶ್ಯಗಳನ್ನು ಮೇವಿನ್ ಜೊಯೆಲ್ ಪಿಂಟೊ ಉತ್ತಮವಾಗಿ ಸಂಕಲನ ಮಾಡಿದ್ದಾರೆ.
ಆರು ಹಾಡುಗಳಿಗೆ ಆಲ್ವಿನ್ ಫೆರ್ನಾಂಡಿಸ್, ಕ್ಯಾಜಿಟನ್ ಡಾಯಸ್, ಜೊಯೆಲ್ ಪಿರೇರಾ ಹಾಗೂ ಎರಿಕ್ ಒಝೇರಿಯೊ ಸಂಗೀತ ರಚಿಸಿದ್ದಾರೆ. ಪ್ರಸಿದ್ಧ ಗಾಯಕ ನಿಹಾಲ್ ತಾವ್ರೊ ಹಾಗೂ ಇತರ ಗಾಯಕರು ದನಿಗೂಡಿಸಿದ್ದಾರೆ.
ಡೆನಿಸ್ ಮೊಂತೆರೊ, ಅಶ್ವಿನ್ ಡಿಕೊಸ್ತಾ, ವೆನ್ಸಿಟಾ ಡಾಯಸ್ , ಪ್ರಿನ್ಸ್ ಜೇಕಬ್, ಸಾಯಿಶ್ ಪನಂದಿಕರ್, ಗೌರೀಶ್ ವೆರ್ಣೆಕರ್
, ಸ್ಟಾೃನಿ ಆಳ್ವಾರಿಸ್, ನೆಲ್ಲು ಪೆರ್ಮನ್ನೂರ್, ಸುನೀಲ್ ಸಿದ್ದಿ, ಲುಲು ಫೊರ್ಟೆಸ್, ನವೀನ್ ಲೋಬೊ ಸಹಿತ ಗೋವಾ ಮತ್ತು ಮಂಗಳೂರಿನ ಖ್ಯಾತ ಕಲಾವಿದರು ಪ್ರಮುಖ ಭೂಮಿಕೆಯಲ್ಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.