ಜಿಲ್ಲೆ

ಜಿಎಸ್‌ಬಿ ಸಮುದಾಯ ಸುಸಂಸ್ಕೃತ ಜೀವನಕ್ಕೆ ಮಾದರಿ: ಸನ್ಮಾನ, ಪ್ರತಿಭಾ ಪುರಸ್ಕಾರದಲ್ಲಿ ಸಿಎ ನಂದಗೋಪಾಲ ಶೆಣೈ ಅಭಿಪ್ರಾಯ

Udupi

ಜನ್ನಾಡಿ: ಜಿಎಸ್‌ಬಿ ಸಮುದಾಯ ಸದಸ್ಯರು ಭ್ರಾತೃತ್ವ, ಸಾಮರಸ್ಯ, ಸುಸಂಸ್ಕೃತ ಜೀವನಕ್ಕೆ ಮಾದರಿಯಾಗಿದ್ದಾರೆ. ಸಮುದಾಯದ ಸದಸ್ಯರು ಸಮಾಜದ ಎಲ್ಲರೊಂದಿಗೆ ಬೆರೆತು ಹಲವು ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಮಾಡಿದ್ದಾರೆ ಎಂದು ಮಂಗಳೂರು ವಿಶ್ವ ಕೊಂಕಣಿ ಕೇಂದ್ರ ಅಧ್ಯಕ್ಷ ಸಿಎ ನಂದಗೋಪಾಲ ಶೆಣೈ ಹೇಳಿದರು.

ಸಾಬರಕಟ್ಟೆಯಲ್ಲಿ ಭಾನುವಾರ ಮಂಗಳೂರು ಜಿಎಸ್‌ಬಿ ದೇವಾಲಯಗಳ ಒಕ್ಕೂಟ ಕುಂದಾಪುರ ವಲಯದ ಸಾಧಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿ, ಮಂಗಳೂರು ದಕ್ಷಿಣ ಕ್ಷೇತ್ರ ಶಾಸಕ ಡಿ. ವೇದವ್ಯಾಸ ಕಾಮತ್, ಸ್ವಾತಂತ್ರೃ ಅಮೃತ ಮಹೋತ್ಸವ ಈ ಸಂದರ್ಭದಲ್ಲಿ ಯುವಪೀಳಿಗೆಯ ಜವಾಬ್ದಾರಿ ಕುರಿತು ತಿಳಿಸಿದರು.

ಕುಂದಾಪುರ ವಲಯ ಜಿಎಸ್‌ಬಿ ದೇವಾಲಯ ಒಕ್ಕೂಟ ಅಧ್ಯಕ್ಷ ಡಿ. ಗೋಪಾಲಕೃಷ್ಣ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಜಿಎಸ್‌ಬಿ ದೇವಾಲಯ ಒಕ್ಕೂಟ ಅಧ್ಯಕ್ಷ, ಸಿಎ ಎಂ. ಜಗನ್ನಾಥ ಕಾಮತ್, ಶಿರಾಲಿ ಮಹಾಮ್ಮಾಯಿ ಮಹಾಗಣಪತಿ ದೇವಳ ಆಡಳಿತ ಮೊಕ್ತೇಸರ ಡಿ. ಗೋಪಿನಾಥ ಕಾಮತ್ ಉಪಸ್ಥಿತರಿದ್ದರು.

ಸಾಧಕರಿಗೆ ಸನ್ಮಾನ: ಕೋಟೇಶ್ವರ ಪಟ್ಟಾಭಿರಾಮಚಂದ್ರ ದೇವಳ ಮೊಕ್ತೇಸರ ಕೆ. ಶ್ರೀಧರ ವಿಠಲ ಕಾಮತ್, ಕುಂದಾಪುರ ವೆಂಕಟರಮಣ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ರಾಧಾಕೃಷ್ಣ ಶೆಣೈ, ಕಲ್ಮರ್ಗಿ ಶಿರಿಯಾರ ಉದ್ಯಮಿ ರಘುರಾಮ ನಾಯಕ್ ದಂಪತಿ, ಉದ್ಯಮಿ, ಸಮಾಜಸೇವಕ ಡಿ. ವಾಮನ ಕಾಮತ್ ಸಿದ್ದಾಪುರ, ಮಣೂರಿನ ಪ್ರಗತಿಪರ ಕೃಷಿಕ ಮಕ್ಕಿಮನೆ ವಾಸುದೇವ ಪ್ರಭು ದಂಪತಿ, ವಿಜ್ಞಾನಿ ಶ್ರೀಕಾಂತ್ ಅಣ್ಣಪ್ಪ ಪೈ ಗಂಗೊಳ್ಳಿ, ಭಜನಾ ಸಂತರಾದ ಆಟಕೆರೆ ಲಕ್ಷ್ಮೀದೇವಿ ಸದಾನಂದ ಪೈ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು.

ಸನ್ಮಾನಿತರ ಪರವಾಗಿ ಕೆ. ಶ್ರೀಧರ ವಿಠಲ ಕಾಮತ್ ಮಾತನಾಡಿ ಉನ್ನತ ಹುದ್ದೆ ಪಡೆದ ಮೇಲೆ ಸಂಸ್ಕಾರ ಆಚಾರ ವಿಚಾರಗಳನ್ನು ಮರೆಯದೆ ಹಿರಿಯರ ಆದರ್ಶಗಳನ್ನು ಪಾಲಿಸುವಂತೆ ಕಿವಿಮಾತು ಹೇಳಿದರು. ಚೇಂಪಿ ಲಕ್ಷ್ಮೀ ವೆಂಕಟರಮಣ ದೇವಳ ಅಧ್ಯಕ್ಷ ದಿನಕರ ಶೆಣೈ, ಸಾಬರಕಟ್ಟೆ ಶಿರಿಯಾರ ಜಿಎಸ್‌ಬಿ ಸಮಾಜ ಅಧ್ಯಕ್ಷ ಗಾವಳಿ ನಾರಾಯಣ ಶೆಣೈ ಮುದ್ದುಮನೆ ಉಪಸ್ಥಿತರಿದ್ದರು. ಮಂಗಳೂರು ಜಿಎಸ್‌ಬಿ ದೇವಳಗಳ ಒಕ್ಕೂಟ ಕಾರ್ಯದರ್ಶಿ ಟಿ.ಗಣಪತಿ ಸ್ವಾಗತಿಸಿದರು. ಮಂಗಳೂರು ಜಿಎಸ್‌ಬಿ ದೇವಳಗಳ ಒಕ್ಕೂಟ ಉಪಾಧ್ಯಕ್ಷ ಕೆ. ದಿನೇಶ್ ಜಿ. ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿರಿಯಾರ ಗಣೇಶ್ ನಾಯಕ್ ನಿರೂಪಿಸಿದರು. ಸಾಬ್ರಕಟ್ಟೆ ಶಿರಿಯಾರ ಜಿಎಸ್‌ಬಿ ಸಮಾಜದ ಕಾರ್ಯದರ್ಶಿ ಮಧುವನ ಮಾಧವ ಹೆಗ್ಡೆ ವಂದಿಸಿದರು.