ಹುಬ್ಬಳ್ಳಿ : ಕೊಂಕಣ ರೈಲ್ವೆ ಕಾಪೋರೇಷನ್ ಅನ್ನು ಭಾರತೀಯ ರೈಲ್ವೆಯಲ್ಲಿ ಸೇರಿಸುವ ಕುರಿತು ಚಿಂತನೆ ನಡೆದಿದ್ದು, ಮಹಾರಾಷ್ಟ್ರ ಚುನಾವಣೆ ನಂತರ ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.
ಇಲ್ಲಿನ ರೈಲ್ ಸೌಧದಲ್ಲಿ ಗುರುವಾರದಂದು ನೈಋತ್ಯ ರೈಲ್ವೆ ವಲಯದ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕಳೆದ ಕೆಲ ವರ್ಷಗಳಿಂದ ಈ ಬಗ್ಗೆ ಚಿಂತನೆ ನಡೆದಿದೆ ಎಂದರು.
ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದ ವಿವಿಧ ಭಾಗಗಳನ್ನು ಹೊಂದಿರುವ ಕೊಂಕಣ ರೈಲ್ವೆ, ದೇಶದ ಪಶ್ಚಿಮ ಕರಾವಳಿ ಉದ್ದಕ್ಕೂ ಚಲಿಸುತ್ತದೆ ಎಂದು ಹೇಳಿದರು.
ಈ ಹಿಂದೆಯೇ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯಲ್ಲಿ ಸೇರಿಸುವ ಪ್ರಯತ್ನ ನಡೆದಿತ್ತು. ಆದರೆ, ಮಹಾರಾಷ್ಟ್ರದಲ್ಲಿ ಕೆಲ ಮಟ್ಟಿನ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ, ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಂತರ ಈ ಪ್ರಕ್ರಿಯೆಗೆ ವೇಗ ನೀಡಲಾಗುವುದು ಎಂದು ತಿಳಿಸಿದರು.
ಹಗಣಿಗೇರಾ-ರಾಯಚೂರು, ಕಡೂರ- ಚಿಕ್ಕಮಗಳೂರ, ಬಾಗಲಕೋಟೆ-ಕುಡಚಿ, ಧಾರವಾಡ-ಬೆಳಗಾವಿ, ಹುಬ್ಬಳ್ಳಿ-ಅಂಕೋಲಾ, ರಾಯದುರ್ಗ-ತುಮಕೂರು, ಗದಗ- ವಾಡಿ, ಚಿತ್ರದುರ್ಗ-ದಾವಣಗೆರೆ, ಹಾಸನ-ಬೇಲೂರು, ಶಿವಮೊಗ್ಗ- ಶಿಕಾರಿಪುರ-ರಾಣೆಬೆನ್ನೂರ ಹೊಸ ಮಾರ್ಗ, ಹೊಟಗಿ-ಕುಡಗಿ-ಗದಗ ಹಾಗೂ ಹೊಸಪೇಟೆ- ವಾಸ್ಕೊ ದ್ವಿಪಥ ಮಾರ್ಗಗಳ ಬಗ್ಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ರ್ಚಚಿಸಲಾಯಿತು. ಈ ಯೋಜನೆಗಳನ್ನು 2027ರ ಜೂನ್ವರೆಗೆ ಆದ್ಯತೆ ಮೇರೆಗೆ ಪೂರ್ಣಗೊಳಿಸುವಂತೆ ರೈಲ್ವೆ ಅಧಿಕಾರಿಗಳಿಗೆ ಸೂಚಿಸಲಾಯಿತು ಎಂದರು.
ವಂದೇ ಭಾರತ್ ರೈಲಿನ ವೇಗವನ್ನು ಪ್ರತಿ ತಾಸಿಗೆ 110 ಕಿಮೀದಿಂದ 130 ಕಿಮೀಗೆ ಹೆಚ್ಚಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ತಿಳಿಸಿದರು.
ರೈಲ್ವೆ ಯೋಜನೆಗಳಿಗೆ ರಾಜ್ಯ ಸರ್ಕಾರ ತನ್ನ ಪಾಲು ನೀಡುವುದು ದೂರ. ಸಧ್ಯಕ್ಕೆ ಅಗತ್ಯವಿರುವ ಭೂಮಿ ನೀಡಿದರೆ ಸಾಕು ಎಂದು ಸಚಿವ ಸೋಮಣ್ಣ ಹೇಳಿದರು.
ಶಾಸಕ ಮಹೇಶ ಟೆಂಗಿನಕಾಯಿ, ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ, ಜಿಲ್ಲಾಧಿಕಾರಿ ದಿವ್ಯ ಪ್ರಭು ಹಾಗೂ ರೈಲ್ವೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.