ಜಿಲ್ಲೆ

ಹೆದ್ದಾರಿ ಮಾರ್ಗದ ಮನೆಗಳಿಗೆ ಕಡಿಮೆ ಪರಿಹಾರ

Chitradurga

ಕೊಂಡ್ಲಹಳ್ಳಿ: ಬಿ.ಜಿ. ಕೆರೆ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೊಳಪಡುವ ಮನೆಗಳಿಗೆ ಹೆಚ್ಚಿನ ಪರಿಹಾರ ನೀಡಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು.

ಜಿಪಂ ಸದಸ್ಯ ಡಾ.ಬಿ. ಯೋಗೀಶ್ ಬಾಬು ಮಾತನಾಡಿ, ಗ್ರಾಮದ ಮೂಲಕ ಹಾದು ಹೋಗಿದ್ದ ರಾಜ್ಯ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸಿ 150ಎ (ಜೇವರ್ಗಿ-ಶ್ರೀರಂಗಪಟ್ಟಣ) ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾಡಲಾಗಿದೆ. ಇದರಿಂದ ಗ್ರಾಮದ ಬಸವೇಶ್ವರ ಬಡಾವಣೆ ಹಲವರು ಮನೆ ಕಳೆದುಕೊಂಡಿದ್ದು, ಕಡಿಮೆ ಪರಿಹಾರ ನೀಡಲಾಗಿದೆ. ಅಲ್ಲದೆ ಇಲ್ಲಿನ ನಿವಾಸಿಗಳಿಗೆ ಶೀಘ್ರವೇ ಮನೆ ತೆರವುಗೊಳಿಸುವಂತೆ ಹೆದ್ದಾರಿ ಪ್ರಾಧಿಕಾರ ಆದೇಶಿಸಿ ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದೆ ಎಂದು ದೂರಿದರು.

ರಾಂಪುರ, ತಳಕು ಗ್ರಾಮಗಳಿಗೆ ಬೈಪಾಸ್ ವ್ಯವಸ್ಥೆ ಕಲ್ಪಿಸಿರುವ ಪ್ರಾಧಿಕಾರ, ಬಸವೇಶ್ವರ ಬಡಾವಣೆ ಹಾಗೂ ಸುತ್ತಮುತ್ತಲಿನ ಜಮೀನುಗಳಿಗೆ ಸಂಚರಿಸಲು ಫ್ಲೈಓವರ್ ಕಾಮಗಾರಿಗೆ ಮುಂದಾಗಿದೆ. ಇದು ಅವೈಜ್ಞಾನಿಕವಾಗಿದ್ದು, ಅಂಡರ್ ಪಾಸ್ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಗ್ರಾಮದ ಮುಖಂಡ ಸಿದ್ದಣ್ಣ ಮಾತನಾಡಿ,ಬಸವೇಶ್ವರ ಬಡಾವಣೆಯ ಜಗಜೀವನ್‌ರಾಮ್ ಸಮುದಾಯದ ಭವನ ಮುಂಭಾಗದಲ್ಲಿ ನಿರ್ಮಿಸಿರುವ ಸೇತುವೆಯಿಂದ ಮಳೆಗಾಲದಲ್ಲಿ ನೀರು ಸಂಗ್ರಹಗೊಳ್ಳುತ್ತದೆ. ಇದನ್ನು ಸರಿಪಡಿಸಬೇಕೆಂದು ಒತ್ತಾಯಿಸಿದರು.

ವಕೀಲ ಎಸ್.ಎಫ್. ಸಮೀವುಲ್ಲಾ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆ 20 ಅಡಿ ಎತ್ತರ ಹೋಗುವ ಕಾರಣ ಊರಿನ ಅಸ್ತಿತ್ವಕ್ಕೆ ಧಕ್ಕೆಯಾಗುತ್ತದೆ. ಗ್ರಾಪಂ ಆದಾಯ ಮೂಲಗಳಾದ 26 ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳು ತೆರವುಗೊಳ್ಳಲಿದ್ದು, ನೂರಾರು ವ್ಯಾಪಾರಿಗಳು ಬೀದಿಗೆ ಬೀಳಲಿದ್ದಾರೆ. ಮನೆ ಕಳೆದುಕೊಳ್ಳುತ್ತಿರುವವರಿಗೆ ಹೆಚ್ಚಿನ ಪರಿಹಾರ, ಮನೆ ಖಾಲಿ ಮಾಡಲು ಹೆಚ್ಚಿನ ಸಮಯಾವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕಾಗಮಿಸಿದ ಚಳ್ಳಕೆರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಚೇರಿಯ ಕನ್ಸಲ್ಟೆಂಟ್ ಲಲಿತಾ, ಪ್ರಾಧಿಕಾರದ ಮೇಲಧಿಕಾರಿಗಳನ್ನು ಕರೆಸಿ ಕಾಮಗಾರಿ ಸ್ಥಳ ಪರಿಶೀಲಿಸಲು ಸೂಚಿಸುತ್ತೇವೆ. ಅವರು ಬಂದು ಹೋಗುವವರೆಗೆ ಮೇಲ್ಸೇತುವೆ ಕೆಲಸ ಸ್ಥಗಿತಗೊಳಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷ ಎಸ್. ಅಜ್ಜಪ್ಪ, ಸಿಪಿಐ ಜಾಫರ್ ಷರೀಫ್, ಎಚ್. ರಾಮಾಂಜಿನಪ್ಪ, ಶಮಿ, ನಿಂಗಣ್ಣ, ಕಾಮಯ್ಯ, ಬಸಣ್ಣ, ಬಸವರಾಜ್ ಇತರರಿದ್ದರು. ಸಿಪಿಐ ಗೋಪಾಲನಾಯ್ಕ, ಪಿಎಸ್‌ಐ ಕೆ.ಎಂ. ಬಸವರಾಜಪ್ಪ ಬಂದೋಬಸ್ತ್ ಒದಗಿಸಿದ್ದರು.