ಕೊಂಡ್ಲಹಳ್ಳಿ: ತೀವ್ರ ಕುತೂಹಲ ಮೂಡಿಸಿದ್ದ 24 ಸದಸ್ಯರ ಬಲ ಹೊಂದಿರುವ ಕೊಂಡ್ಲಹಳ್ಳಿ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ಗುರುವಾರ ಚುನಾವಣೆ ನಡೆಯಿತು.
ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ತೀವ್ರ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಅಧ್ಯಕ್ಷರಾಗಿ ಎಂ.ಎಲ್.ಪವಿತ್ರಾ, ಉಪಾಧ್ಯಕ್ಷರಾಗಿ ಎಂ.ತಿಪ್ಪೇಸ್ವಾಮಿ ಚುನಾಯಿತರಾದರು.
ಸಾಮಾನ್ಯ ಮಹಿಳೆಗೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪವಿತ್ರಾ 14, ಮಂಜಮ್ಮ 10 ಪಡೆದರು. ಎಸ್ಸಿಗೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಂ.ತಿಪ್ಪೇಸ್ವಾಮಿ ಮತ್ತು ಎಸ್.ಕುಬೇರ ತಲಾ 12 ಮತಗಳನ್ನು ಪಡೆದರು. ಅಂತಿಮವಾಗಿ ಲಾಟರಿಯಲ್ಲಿ ತಿಪ್ಪೇಸ್ವಾಮಿ ಗೆಲುವಿನ ನಗೆ ಬೀರಿದರು.
ತಾಪಂ ಇಒ ಎಚ್.ಗಣೇಶ್, ವ್ಯವಸ್ಥಾಪಕ ಜಿ.ಆರ್.ನಂದೀಶ್, ವಿಜಯ್‌ಕುಮಾರ್ ಚುನಾವಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು. ಪಿಡಿಒ ಎನ್.ಮಲ್ಲಿಕಾರ್ಜುನ್ ಇತರರಿದ್ದರು. ಮೊಳಕಾಲ್ಮೂರು ಠಾಣೆಯ ಪಿಎಸ್‌ಐ ಜಿ.ಪಾಂಡುರಂಗಪ್ಪ ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.