ಕೊಂಡ್ಲಹಳ್ಳಿ: ಕೈ ತೊಳೆಯದೇ ಆಹಾರ ಸೇವನೆ, ಬಯಲು ಶೌಚ, ಅಸ್ವಚ್ಛ ಪರಿಸರ, ಬರಿಗಾಲಲ್ಲಿ ಓಡಾಡುವುದರಿಂದ ಮಕ್ಕಳಿಗೆ ಜುಂತುಹುಳುಗಳ ಸೋಂಕು ತಗುಲುತ್ತದೆ ಎಂದು ಆರೋಗ್ಯ ಸಹಾಯಕ ನವೀನ್ ತಿಳಿಸಿದರು.
ಮಾರಮ್ಮನಹಳ್ಳಿಯ ಸಹಿಪ್ರಾ ಶಾಲೆಯಲ್ಲಿ ಮಂಗಳವಾರ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಏರ್ಪಡಿಸಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಂತುಹುಳುಗಳು ಮಕ್ಕಳ ಬೆಳವಣಿಗೆ ಕುಂಠಿತಗೊಳಿಸುವ ಜತೆಗೆ ರಕ್ತಹೀನತೆ, ಅಪೌಷ್ಟಿಕತೆ ಇತ್ಯಾದಿ ಸಮಸ್ಯೆಗಳನ್ನು ತಂದೊಡ್ಡುತ್ತವೆ. ಹೀಗಾಗಿ ಪಾಲಕರು ತಪ್ಪದೇ ಹತ್ತಿರದ ಆಸ್ಪತ್ರೆಯಲ್ಲಿ ಉಚಿತವಾಗಿ ಸಿಗುವ ಜಂತುಹುಳು ನಿವಾರಣಾ ಮಾತ್ರೆಗಳನ್ನು ಪಡೆದು ಪ್ರತಿ ಆರು ತಿಂಗಳಿಗೊಮ್ಮೆ ಮಕ್ಕಳಿಗೆ ನೀಡಬೇಕು ಎಂದು ತಿಳಿಸಿದರು.
ಶಿಕ್ಷಕರಾದ ಮಮತಾ, ರಶ್ಮಿ, ಎಚ್. ಶ್ರೀನಿವಾಸ್, ಮಾಲಾ ಇತರರಿದ್ದರು.