ಕೊಂಡ್ಲಹಳ್ಳಿ: ಗ್ರಾಮದ ಪ್ರಮುಖ ಬೀದಿಗಳಲ್ಲಿ ಪ್ರತಿಷ್ಠಾಪನೆಗೊಂಡಿದ್ದ ವಿನಾಯಕ ಮೂರ್ತಿಗಳ ವಿಸರ್ಜನಾ ಕಾರ್ಯಕ್ರಮ ಸೋಮವಾರ ವಿಜೃಂಭಣೆಯಿಂದ ನಡೆಯಿತು. ಇಲ್ಲಿನ ಜನತಾ ಕಾಲನಿ, ತೇರುಬೀದಿ, ಎಕೆ ಕಾಲನಿ ಸೇರಿ ವಿವಿಧ ಬೀದಿಗಳಲ್ಲಿನ ಗಣಪನ ಮೂರ್ತಿಗಳ ವಿಸರ್ಜಿಸಲಾಯಿತು.
ಹಸಿರು ತೋರಣ, ವಿವಿಧ ಹೂವುಗಳಿಂದ ಸಿಂಗರಿಸಲಾಗಿದ್ದ ಟ್ರಾೃಕ್ಟರ್‌ಗಳಲ್ಲಿ ಗಣೇಶ ಮೂರ್ತಿಗಳನ್ನು ಇರಿಸಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯುದ್ದಕ್ಕೂ ಡಿಜೆ ಹಾಡಿನ ಸದ್ದಿಗೆ ಬಣ್ಣಗಳನ್ನು ಎರಚಿಕೊಂಡ ಯುವಕರು, ಚಿಣ್ಣರು ಹೆಜ್ಜೆ ಹಾಕಿ ಸಂಭ್ರಮಿಸಿದರು. ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು.
ಗಣೇಶ ಮೂರ್ತಿಗಳನ್ನು ಇಲ್ಲಿನ ತಾಳ್ಕೇರಪ್ಪನವರ ನೀರಿನ ತೊಟ್ಟಿಯಲ್ಲಿ ವಿಸರ್ಜಿಸಲಾಯಿತು. ಮೊಗಲಹಳ್ಳಿ, ಬಿ.ಜಿ.ಕೆರೆ, ಕೋನಸಾಗರ, ಹನುಮಂತನಹಳ್ಳಿಗಳಲ್ಲಿ ಗಣಪತಿ ಮೂರ್ತಿಗಳ ವಿಸರ್ಜನಾ ಮೆರವಣಿಗೆ ನಡೆದವು.