ಜಿಲ್ಲೆ

ಕೊಂಡರಾಜನಹಳ್ಳಿಯಲ್ಲಿ ಗ್ರಾಮೀಣ ದಸರಾ

haripsklr

ಕೋಲಾರ: ನಗರ ಹೊರವಲಯದ ಕೊಂಡರಾಜನಹಳ್ಳಿ ಶ್ರೀಆಂಜನೇಯಸ್ವಾಮಿ ದೇವಸ್ಥಾನದಲ್ಲಿ ತಾಲೂಕು ದಂಡಾಧಿಕಾರಿ ಬನ್ನಿ ಮರ ಕಡಿಯುವ ಸಂಪ್ರದಾಯ, ನಂತರ ಗ್ರಾಮ ದೇವತೆಗಳ ಉತ್ಸವ ಮೂರ್ತಿಗಳ ಮೆರವಣಿಗೆ. ಕೋಲಾರದ ಪಾಲಿಗೆ ಇದೇ ದಸರಾ.

ಮೈಸೂರು ದಸರಾ ಮಾದರಿಯಲ್ಲೇ ಕೋಲಾರದ ಕೊಂಡರಾಜನಹಳ್ಳಿ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಜಯದಶಮಿಯಂದು ಮಧ್ಯಾಹ್ನದ ಮೇಲೆ ಬನ್ನಿಮರಕ್ಕೆ ಪೂಜೆ ಸಲ್ಲಿಸುವ ಸಂಪ್ರದಾಯ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಗೊನೆಸಹಿತ ಬಾಳೆಗಿಡಕ್ಕೆ ಶಮೀವೃಕ್ಷಕದ ರೆಂಬೆಗಳನ್ನು ಕಟ್ಟಿ ಮರ ಕಡಿಯಲಾಗುತ್ತದೆ. ತಾಲೂಕು ದಂಡಾಧಿಕಾರಿಗಳು ಈ ಕಾರ್ಯವನ್ನು ನೆರವೇರಿಸುವುದು ಪದ್ದತಿ.

ಪ್ರಸ್ತುತ ಕೋಲಾರ ತಹಸೀಲ್ದಾರ್ ಮಹಿಳೆಯಾದ್ದರಿಂದ ಈ ಅವಕಾಶ ಉಪವಿಭಾಗಾಧಿಕಾರಿ ಸೋಮಶೇಖರ್ ಅವರಿಗೆ ಸಿಕ್ಕಿತ್ತು. ದೇವಾಲಯಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿಗಳಿಗೆ ದೇವಾಲಯದ ವತಿಯಿಂದ ಪೂರ್ಣ ಕುಂಭ ಸ್ವಾಗತ ಕೋರಿ ಮೈಸೂರುಪೇಟ ತೊಡಿಸಿ ಬನ್ನಿಮರ ನೆಟ್ಟ ಸ್ಥಳಕ್ಕೆ ಕರೆತರಲಾಯಿತು.

ಎಸಿ ಸೋಮಶೇಖರ್ ಬಾಳೆ ಮತ್ತು ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದ ನಂತರ ಕೈಯಲ್ಲಿ ಕತ್ತಿ ಹಿಡಿದು ಬಾಳೆಗಿಡ ಕತ್ತರಿಸಿದರು.ಈ ಕ್ಷಣಕ್ಕೆ ಕಾಯುತ್ತಿದ್ದ ನೂರಾರು ಭಕ್ತರು ಬನ್ನಿ ಎಲೆಗಳನ್ನು, ಬಾಳೇಗೊನೆಯ ಕಾಯಿಗಳನ್ನು ಕಿತ್ತುಕೊಳ್ಳಲು ಮುಗಿಬಿದ್ದರು. ಇಲ್ಲಿ ಪೂಜಿಸಲ್ಪಟ್ಟ ಎಲೆಗಳು ಮತ್ತು ಬಾಳೆಕಾಯಿಗಳನ್ನು ಮನೆಯಲ್ಲಿಟ್ಟು ಪೂಜಿಸಿದರೆ ಇಡೀ ವರ್ಷವೇ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇಲ್ಲಿಯ ಜನತೆಯದ್ದು.

ಬನ್ನಿಮರ ಕಡಿಯುವ ಕಾರ್ಯ ಮುಗಿಯುತ್ತಿದ್ದಂತೆ ವಿವಿಧ ಗ್ರಾಮ ದೇವತೆಗಳ ಪಲ್ಲಕ್ಕಿಗಳಿಗೆ ಪೂಜೆ ಸಲ್ಲಿಸಲಾಯಿತು.ಪಲ್ಲಕಿಗಳು ಊರಿನ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯಲ್ಲಿ ಸಾಗಿತು. ಗ್ರಾ.ಪಂ ಮಾಜಿ ಉಪಾಧ್ಯಕ್ಷ ಕೆ.ವಿ.ಶ್ರೀನಿವಾಸ ಯಾದವ್ ಇತರರು ಪಾಲ್ಗೊಂಡಿದ್ದರು. ಕರೊನಾ ಹಿನ್ನೆಲೆಯಲ್ಲಿ ಈ ಬಾರಿ ಸರಳ ಆಚರಣೆ ಮೂಲಕ ದಸರಾವನ್ನು ಸಂಪನ್ನಗೊಳಿಸಲಾಯಿತು