ಜಿಲ್ಲೆ

ಕೊಂಚಾಡಿ-ದೇರೆಬೈಲ್ ಸಂಚಾರ ದುಸ್ತರ, ರಸ್ತೆ ನುಂಗಿದ ಹೊಂಡ ವಾಹನ ಸವಾರರಿಗೆ ತೀವ್ರ ಸಂಕಷ್ಟ

ಮಂಗಳೂರು: ಮಂಗಳೂರಿನ ಸ್ಮಾರ್ಟ್ ಸಿಟಿಯ ಅವಾಂತರಗಳ ಸಾಕ್ಷಾತ್ ದರ್ಶನ ಮಳೆಗಾಲದಲ್ಲಿ ಗೋಚರಿಸುತ್ತಿದೆ. ನಗರದ ಮುಖ್ಯ ರಸ್ತೆಗಳಲ್ಲಿ ಹೊಂಡಗಳಾಗಿದ್ದು, ಬಹುತೇಕ ಒಳರಸ್ತೆಗಳು ಹದಗೆಟ್ಟು ಹೋಗಿ ವಾಹನ ಸಂಚಾರಕ್ಕೆ ದುಸ್ತರವಾಗಿವೆ.
ಕೊಂಚಾಡಿ-ದೇರೆಬೈಲ್ ಮೂಲಕ ಯೆಯ್ಯಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ನಾಗಕನ್ನಿಕಾ ದೇವಳದ ಎದುರು ಬೃಹತ್ ಹೊಂಡವಾಗಿ ರಸ್ತೆಯನ್ನೇ ನುಂಗಿ ಹಾಕಿದೆ. ದ್ವಿಚಕ್ರ ವಾಹನ ಸವಾರರು ಬಿದ್ದು ಎದ್ದು ಹೋಗುವ ಪರಿಸ್ಥಿತಿ ಇದೆ. ಈ ಹೊಂಡದಲ್ಲಿ ನೀರು ನಿಂತಿದ್ದು, ಎಷ್ಟು ಆಳವಿದೆ ಎನ್ನುವುದು ಗಮನಕ್ಕೆ ಬರುತ್ತಿಲ್ಲ. ಎದುರಿನಿಂದ ವಾಹನ ಬಂದರೆ ಹೊಂಡಕ್ಕೆ ಇಳಿಸುವುದು ಅನಿವಾರ್ಯ.
ಈ ಭಾಗದಲ್ಲಿ ನೂರಾರು ಮನೆಗಳಿದ್ದು, ಇಲ್ಲಿನ ಜನತೆ ನಗರ ಸಂಪರ್ಕಕ್ಕೆ ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಹೊಂಡ ಉಂಟಾಗಿರುವ ರಸ್ತೆಯ ಬಳಿಯಲ್ಲೇ ಶಾಲೆ ಹಾಗೂ ಡೇ ಕೇರ್ ಸೆಂಟರ್ ಇದೆ. ಇಲ್ಲಿಗೆ ಮಕ್ಕಳನ್ನು ಕರೆದುಕೊಂಡು ಬರುವವರು ರಸ್ತೆಯ ದುರವಸ್ಥೆಯಿಂದ ಪ್ರಯಾಸ ಪಡುವಂತಾಗಿದೆ. ಜೋರು ಮಳೆ ಬರುವಾಗ ಇಲ್ಲಿರುವ ಮನೆಯ ಅಂಗಳದ ತನಕ ನೀರು ಬರುತ್ತಿದೆ.
ನಾಗ ಕನ್ನಿಕಾ ದೇವಸ್ಥಾನದ ಎದುರಲ್ಲೇ ಈ ರಸ್ತೆ ಹಾದು ಹೋಗುತ್ತಿದ್ದು, ದಿನಂಪ್ರತಿ ದೇವಾಲಯಕ್ಕೆ ಬರುವವರು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಕೊಂಚಾಡಿಯಿಂದ ಯೆಯ್ಯಡಿ, ಮೇರಿಹಿಲ್ ಕಡೆಗೆ ಹೋಗುವ ನೂರಾರು ವಿದ್ಯಾರ್ಥಿಗಳು, ಉದ್ಯೋಗಿಗಳು ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ರಸ್ತೆಯಲ್ಲಿ ಬೃಹತ್ ಹೊಂಡವಾಗಿರುವ ಕಾರಣ ವಾಹನಗಳ ಅಡಿಭಾಗ ನೆಲಕ್ಕೆ ತಾಗುತ್ತಿದೆ. ತಾತ್ಕಾಲಿಕವಾಗಿ ಜಲ್ಲಿ ಹಾಕಿಯಾದರೂ ಸರಿಪಡಿಸಿ ಕೊಟ್ಟು ಪ್ರಾಣ ಹಾನಿಯಾಗುವುದನ್ನು ತಡೆಗಟ್ಟಬೇಕು ಎಂದು ಈ ಭಾಗದ ಜನತೆ ಒತ್ತಾಯಿಸಿದ್ದಾರೆ.

ಬೀದಿ ನಾಯಿ ಕಾಟ ಹೆಚ್ಚಳ: ಕೊಂಚಾಡಿ, ದೇರೆಬೈಲ್ ಪರಿಸರದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ರಾತ್ರಿ ವೇಳೆ ಪಾದಚಾರಿಗಳನ್ನು ಬೆನ್ನತ್ತಿಕೊಂಡು ಬರುತ್ತಿವೆ. ದ್ವಿಚಕ್ರ ವಾಹನಗಳ ಹಿಂಬದಿಯಿಂದ ಓಡಿ ಬರುತ್ತಿದ್ದು, ಸವಾರರು ನಿಯಂತ್ರಣ ತಪ್ಪಿ ಬೀಳುವಂತಾಗಿದೆ. ಶಾಲಾ ಮಕ್ಕಳು ನಡೆದುಕೊಂಡು ಹೋಗಲು ಭಯ ಪಡುವಂತಾಗಿದೆ. ಇದಕ್ಕೂ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.


ಕೊಂಚಾಡಿಯಿಂದ ದೇರೆಬೈಲ್ ಮೂಲಕ ಯೆಯ್ಯಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಸಂಚರಿಸುವುದೇ ದುಸ್ತರವಾಗಿದೆ. ನೀರು ನಿಂತರೆ ಹೊಂಡ ಇರುವುದು ಗಮನಕ್ಕೆ ಬರುವುದಿಲ್ಲ. ಆಟೋ ಚಾಲಕರು ಬಾಡಿಗೆಗೆ ಬರಲು ಒಪ್ಪುತ್ತಿಲ್ಲ. ಈ ಭಾಗದ ಜನರಿಗೆ ತೊಂದರೆಯಾಗಿದೆ.
ಜ್ಞಾನೇಶ್, ಸ್ಥಳೀಯರು

ಕೊಂಚಾಡಿ, ದೇರೆಬೈಲ್ ರಸ್ತೆ ಹದಗೆಟ್ಟಿರುವುದು ಗಮನಕ್ಕೆ ಬಂದಿದೆ. ಹಲವು ಕಡೆಗಳಲ್ಲಿ ಮಳೆಯಾಗುತ್ತಿರುವುದರಿಂದ ದುರಸ್ತಿ ಮಾಡಲು ಸಾಧ್ಯವಾಗುತ್ತಿಲ್ಲ. ಶೀಘ್ರದಲ್ಲೇ ಕಲ್ಲು ತಂದು ಹಾಕಿ ತಾತ್ಕಾಲಿಕವಾಗಿ ಸರಿಪಡಿಸಲಾಗುವುದು. ಸಾರ್ವಜನಿಕರು ಸಹಕಾರ ನೀಡಬೇಕು.
ರಜನಿ ಎಲ್. ಕೋಟ್ಯಾನ್ ಮನಪಾ ಸದಸ್ಯೆ, ದೇರೆಬೈಲ್ ಪೂರ್ವ