ಬಂಗಾರಪೇಟೆ: ಹೈನುಗಾರಿಕೆ ಪಿತಾಮಹ ದಿವಂಗತ ಎಂ.ವಿ.ಕೃಷ್ಣಪ್ಪ ಅವರ ಹೆಸರಿನಲ್ಲಿ ಭ್ರಷ್ಟಾಚಾರ ನಡೆದೆರ ನೋಡಿಕೊಂಡು ಸುಮ್ಮನೆ ಇರೋದಿಲ್ಲ. ಕೊನೆವೆರಗೂ ನ್ಯಾಯಕ್ಕಾಗಿ ಹೋರಾಟ ನಡೆಸುತ್ತೇನೆ ಎಂದು ಕೋಲಾರ ಹಾಲು ಒಕ್ಕೂಟದ ನಿರ್ದೇಶಕ ಹಾಗೂ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಪರೋಕ್ಷವಾಗಿ ಹೆಸರು ಹೇಳದೆ ಕೋಮುಲ್ ಅಧ್ಯಕ್ಷ್ಯ, ಶಾಸಕ ನಂಜೇಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಒಂಬತ್ತುಗುಳಿ, ಕಾರಮಂಗಲ, ಹುಲಿಬೆಲೆ ಮತ್ತು ಅಬ್ಬಗಿರಿಹೊಸಳ್ಳಿ ಗ್ರಾಮಗಳ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ನಿರ್ದೇಶಕರ ಚುನಾವಣೆಯಲ್ಲಿ ನನ್ನ ವಿರುದ್ಧ ಜಾತಿಯನ್ನು ಎತ್ತಿಕಟ್ಟಿ ಸೋಲಿಸಲು ಪ್ಲ್ಯಾನ್ ಮಾಡಿದ್ದರು. ಆದೆರ, ನನ್ನ ಮೇಲಿದ್ದ ವಿಶ್ವಾಸಕ್ಕೆ ಮತ ಹಾಕಿ ಹಾಲು ಒಕ್ಕೂಟದ ನಿರ್ದೇಶಕರನ್ನಾಗಿ ಗೆಲ್ಲಿಸಿದ್ದಾರೆ. ಕೋಮುಲ್ನಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ಬಯಲಿಗೆ ತಂದೇ ತರುತ್ತೇನೆ ಎಂದು ಹೇಳಿದರು.
ಕೋಮುಲ್ನಲ್ಲಿ ಸಾಮಾನ್ಯ ಸಭೆ ನಡೆದ ಮಾತ್ರಕ್ಕೆ ಎಲ್ಲವೂ ಸರಿ ಹೋಗಿದೆ ಅಂತ ಅಂದುಕೊಳ್ಳಬೇಡಿ ಎಂದ ಅವರು, ತಾಲೂಕಿನ ಪ್ರತಿ ಹಳ್ಳಿಯಲ್ಲಿ ಹಾಲು ಡೇರಿ ತೆರೆಯಲು ಈಗಿನಿಂದಲೇ ಯೋಜನೆ ರೂಪಿಸಲಾಗುತ್ತಿದೆ. ಆಂಧ್ರ ಮತ್ತು ತಮಿಳುನಾಡು ರಾಜ್ಯಗಳಿಂದ ಲಗ್ಗೆ ಇಡುತ್ತಿರುವ ಹಾಲಿನ ಮಾರಾಟವನ್ನು ಬಂದ್ ಮಾಡಿ ನಮ್ಮ ನಂದಿನಿ ಹಾಲು ಮಾರಾಟ ಅಧಿಕ ಮಾಡಲಾಗುವುದು. ಇದರಿಂದ ನಂದಿನಿ ಹಾಲಿಗೆ ಬೇಡಿಕೆ ಹೆಚ್ಚಾಗಿ ರೈತರಿಗೆ ಮತ್ತಷ್ಟು ಲಾಭಾಂಶ ಬರಲಿದೆ ಎಂದರು.
ಹಾಲು ಒಕ್ಕೂಟದ ತಾಲೂಕು ಉಪ ವ್ಯವಸ್ಥಾಪಕ ಗಿರೀಶ್ ಗೌಡ, ವಿಸ್ತರಣಾಧಿಕಾರಿ ಕಿರಣ್ ಕುಮಾರ್, ಸಹಕಾರ ಅಭಿವೃದ್ಧಿ ಅಧಿಕಾರಿ ಬಾಲಕೃಷ್ಣ ಇದ್ದರು.
ವಿವಿಧ ಕಾಮಗಾರಿಗೆ ಚಾಲನೆ: ಶಾಸಕ ಎಸ್.ಎನ್.ನಾರಾಯಣಸ್ವಾಮಿ ಒಂಬತ್ತುಗುಳಿ ಗ್ರಾಮದಲ್ಲಿ ನೂತನ ಅಂಗನವಾಡಿ ಕೇಂದ್ರ ಕಟ್ಟಡವನ್ನು ಉದ್ಘಾಟಿಸಿದರು. 25 ಲಕ್ಷ ರೂ. ಸಿಸಿ ರಸ್ತೆ ಡಾಂಬರೀಕರಣ, 30 ಲಕ್ಷ ರೂ. ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.