ಜಿಲ್ಲೆ

ಕೊಮಾರನಹಳ್ಳಿಯ ಹೆಳವನಕಟ್ಟೆ ಲಕ್ಷ್ಮಿರಂಗನಾಥ ಕಾರ್ಣಿಕ

Davangere - Desk - Basavaraja P

ಮಲೇಬೆನ್ನೂರು: ಸಮೀಪದ ಕೊಮಾರನಹಳ್ಳಿಯ ಹೆಳವನಕಟ್ಟೆ ಲಕ್ಷಿ ್ಮೀರಂಗನಾಥ ಸ್ವಾಮಿ ದೇವಾಲಯದ ಕೆರೆ ಬಯಲಿನ ಕಟ್ಟೆಯಲ್ಲಿ ಸೋಮವಾರ ಕಾರ್ಣಿಕೋತ್ಸವ ನೆರವೇರಿತು.

ಕಾರ್ಣಿಕ ನುಡಿ: ಹರಳಹಳ್ಳಿ ಆಂಜನೇಯ ಸ್ವಾಮಿ ಆವಾಹಿತ ಗಣಮಗ ‘ಮುತ್ತಿನ ರಾಶಿಗೆ ಸರ್ಪ ಸುತ್ತಿತಲೆ ಸರ್ಪಕ್ಕೆ ಹದ್ದು ತಾಗೀತಲೆ ಎಚ್ಚರ’ ಎಂದು ಕಾರ್ಣಿಕ ನುಡಿದರು.

ಪಟ್ಟಣದ ರಾಜಬೀದಿಯಲ್ಲಿ ಹರಳಹಳ್ಳಿ ಆಂಜನೇಯ ಸ್ವಾಮಿ, ಹಿರೇಹಾಲಿವಾಣದ ಏಳೂರು ಕರಿಯಮ್ಮ, ಜೋಡಿ ಆಂಜನೇಯ ಸ್ವಾಮಿ ಉತ್ಸವ ಮೂರ್ತಿ ಮೆರವಣಿಗೆ ನೆರವೇರಿತು. ಪಟ್ಟಣದ ಜೋಯಿಸರ ಬೀದಿಯಲ್ಲಿ ಕಾರ್ಣಿಕ ನುಡಿಯುವ ಹರಳಹಳ್ಳಿ ಆಂಜನೇಯ ಸ್ವಾಮಿಗೆ ತುಳಸೀಹಾರ ಅರ್ಪಿಸಿ, ಪೂಜೆ ಸಲ್ಲಿಸಲಾಯಿತು.

ಕೊಂಬು, ಕಹಳೆ, ಮಂಗಳವಾದ್ಯ, ಜಾಗಟೆ ಮೇಳ, ಗೊರವರ ತಂಡ, ಜಾಂಜ್ ಮೇಳ, ನಾಸಿಕ್ ಡೋಲು, ಭೂತದ ಹಲಗೆ ಹಿಡಿದವರು, ದಾಸರು, ಗೊರವರ ತಂಡ, ಡೊಳ್ಳು, ತಮಟೆ ಮೇಳ ಉತ್ಸವಕ್ಕೆ ಕಳೆ ತಂದವು.

ದಿಬ್ಬದಹಳ್ಳಿ, ಕೊಪ್ಪ, ಹಾಲಿವಾಣ, ತಿಮ್ಲಾಪುರದಿಂದ ಬೀರಲಿಂಗೇಶ್ವರ, ದುರ್ಗಾಂಬಿಕಾ, ಏಕನಾಥೇಶ್ವರಿ, ಕೋಡಿಮಾರೇಶ್ವರಿ, ಕಾಳಮ್ಮ, ಜೋಡಿ ಆಂಜನೇಯ ಉತ್ಸವಮೂರ್ತಿಗಳು ಪಾಲ್ಗೊಂಡಿದ್ದವು.

ಕಾರ ಮಂಡಕ್ಕಿ, ಮೆಣಸಿನಕಾಯಿ, ಬಲೂನ್, ಆಟಿಕೆಗಳು, ಬೆಂಡು ಬತ್ತಾಸು, ಐಸ್‌ಕ್ರೀಂ, ಜ್ಯೂಸ್ ಸ್ಟಾಲ್‌ಗಳು ಮಕ್ಕಳನ್ನು ಸೆಳೆದವು. ಟ್ರಾೃಕ್ಟರ್, ಆಟೋ, ದ್ವಿಚಕ್ರ ವಾಹನ, ಕಾರುಗಳ ಹೆಚ್ಚಿನ ಸಂಖ್ಯೆಯಲ್ಲಿದ್ದವು. ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದ್ದರು.

ಉಪ ತಹಸಿಲ್ದಾರ್ ರವಿ, ಗ್ರಾಮ ಆಡಳಿತಾಧಿಕಾರಿ ಅಣ್ಣಪ್ಪ, ಪುರಸಭೆ ಸದಸ್ಯ ಬೆಣ್ಣೆಹಳ್ಳಿ ಸಿದ್ದೇಶ್, ತಾಪಂ ಮಾಜಿ ಅಧ್ಯಕ್ಷ ಐರಣಿ ಅಣ್ಣಪ್ಪ, ಎಪಿಎಂಸಿ ನಿರ್ದೇಶಕ ಮಂಜುನಾಥ್ ಪಟೇಲ್, ಮುಖಂಡರಾದ ಕೆ.ಜಿ. ಪರಮೇಶಪ್ಪ, ಜಿಗಳಿ ಹನುಮಗೌಡ ಇತರರಿದ್ದರು.

ದೇವರಬೆಳಕೆರೆ: ನಾಗರ ಪಂಚಮಿ ಪ್ರಯುಕ್ತ ದೇವರಬೆಳಕೆರೆಯಲ್ಲಿ ಶ್ರೀ ಮೈಲಾರಲಿಂಗೇಶ್ವರ ಕಾರ್ಣಿಕ ಮುತ್ತಿನ ರಾಶಿ ಮೂರು ಭಾಗ ಆದಿತಲೇ ಪರಾಕ್ ಎಂದು ನುಡಿಯಿತು. ದೇವರಬೆಳಕೆರೆ ಶ್ರೀ ಮೈಲಾರಲಿಂಗೇಶ್ವರ, ಬಸವೇಶ್ವರ, ಹಳ್ಳದ ದುರ್ಗಾಂಬಿಕಾ, ಕಟ್ಟಿ ದುರ್ಗಮ್ಮ, ಶಿರನಹಳ್ಳಿ ಆಂಜನೇಯ ಸ್ವಾಮಿ, ಬೂದಿಹಾಳ ದುರ್ಗಮ್ಮ ಭಾಗವಹಿಸಿದ್ದವು.