ಜಿಲ್ಲೆ

ಕೋಳೂರು ಕುಮಾರ್ ಬೆಟ್ಟಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ

ಮೂಡಿಗೆರೆ: ಬೆಟ್ಟಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿಎಸ್‌ಪಿ ಬೆಂಬಲಿತ ಸದಸ್ಯ ಕೋಳೂರು ಕುಮಾರ್ ಅಧ್ಯಕ್ಷರಾಗಿ ವಿರೋಧವಾಗಿ ಆಯ್ಕೆಯಾದರು. 7 ಸದಸ್ಯ ಬಲದ ಗ್ರಾಪಂನಲ್ಲಿ ಬಿಎಸ್ಪಿ ಬೆಂಬಲಿತ 4, ಜೆಡಿಎಸ್ ಬೆಂಬಲಿತ 2, ಬಿಜೆಪಿ ಬೆಂಬಲಿತ 1 ಸದಸ್ಯರಿದ್ದಾರೆ. ಅಧ್ಯಕ್ಷ ಬಿ.ಕೆ.ದಿನೇಶ್ ಗೌಡ ಅವರ ರಾಜೀನಾಮೆಅಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಇತರೆ ಸದಸ್ಯರು ನಾಮಪತ್ರ ಸಲ್ಲಿಸದ ಹಿನ್ನಲೆಯಲ್ಲಿ ಚುನಾವಣಾಧಿಕಾರಿ ನವೀನ್ ಕುಮಾರ್ ಕೋಳೂರು ಕುಮಾರ್ ಅವರ ಅವಿರೋಧ ಆಯ್ಕೆ ಘೋಷಿಸಿದರು.

ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ಬಿಎಸ್ಪಿ ರಾಜ್ಯ ಉಪಾಧ್ಯಕ್ಷ ಜಾಕೀರ್ ಹುಸೇನ್ ಮಾತನಾಡಿ, ತಳಮಟ್ಟದಿಂದ ರಾಜಕಾರಣದಲ್ಲಿ ತೊಡಗಲು ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯ ಸ್ಥಾನ ಉತ್ತಮ ವೇದಿಕೆ. ಜಯಗಳಿಸಿದ ನಂತರ ಪಕ್ಷ ಮತ್ತು ಜಾತಿಗೆ ಅಂಟಿಕೊಳ್ಳದೆ ಸಿಕ್ಕಿರುವ ಅವಧಿಯಲ್ಲಿ ಗ್ರಾಪಂ ವ್ಯಾಪ್ತಿಯ ಜನರ ಸೇವೆ ಮಾಡುವ ಜತೆಗೆ ಗ್ರಾಮಕ್ಕೆ ಮೂಲ ಸೌಕರ್ಯ ಒದಗಿಸುವುದು ಅಗತ್ಯ ಎಂದರು.

ಸಾಂವಿಧಾನಿಕ ಅಧಿಕಾರ ಎಂಬುದು ಮುಳ್ಳಿನ ಹಾಸಿಗೆ. ಜನ ಪ್ರತಿನಿಧಿಗಳು ಪ್ರತಿ ಹೆಜ್ಜೆ ಇಡುವಾಗ ಯೋಚಿಸಿ, ಸರ್ವರಿಗೂ ನ್ಯಾಯ ಒದಗಿಸುವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ನೂತನ ಅಧ್ಯಕ್ಷರು ಎಲ್ಲ ಸದಸ್ಯರ ಸಹಕಾರ ಪಡೆದು ಗ್ರಾಪಂ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಬಿಎಸ್ಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಲೋಕವಳ್ಳಿ ರಮೇಶ್ ಮಾತನಾಡಿ, ಬೆಟ್ಟಗೆರೆ ಗ್ರಾಪಂನಲ್ಲಿ ಬಿಎಸ್ಪಿ ಸರಳ ಬಹುಮತ ಹೊಂದಿದ್ದರೂ ಕೂಡ, ಗ್ರಾಪಂ ವ್ಯಾಪ್ತಿಯಲ್ಲಿ ಪಕ್ಷದ ಮೇಲಾಟ ಬೇಡ ಎಂದು ಇತರೆ ಪಕ್ಷದವರನ್ನು ಬೆಂಬಲಿಸಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಗ್ರಾಮಸ್ಥರೊಂದಿಗೆ ವಿಶ್ವಾಸಗಳಿಸಿ ಗ್ರಾಮದ ಅಭಿವೃದ್ಧಿಯಲ್ಲಿ ತೊಡಗಬೇಕು ಎಂದು ತಿಳಿಸಿದರು.

ಗ್ರಾಪಂ ಉಪಾಧ್ಯಕ್ಷೆ ಹೂವಮ್ಮ, ಮಾಜಿ ಅಧ್ಯಕ್ಷರಾದ ಬಿ.ಕೆ.ದಿನೇಶ್ ಗೌಡ, ಗೋಪಾಲಗೌಡ, ಸದಸ್ಯರಾದ ಸುಶೀಲ, ಸುಂದರಿ, ಕೃತಿ, ಮಾಜಿ ಜಿಪಂ ಸದಸ್ಯ ಬಿ.ಆರ್.ಸುಬ್ಬಯ್ಯ, ಮುಖಂಡರಾದ ಬಿ.ಎಂ.ಶಂಕರ್, ಬಕ್ಕಿ ಮಂಜು, ಅಣ್ಣಪ್ಪ, ಲಕ್ಷ್ಮಣ್ ದೊಡ್ಡಯ್ಯ, ಶ್ರೀಕಾಂತ್, ಸುಮಿತ್ರ, ಅಣ್ಣಪ್ಪ, ಹೊನ್ನೇಶ್, ಲೋಕೇಶ್, ಪ್ರಾಣೇಶ್, ಸುರೇಶ್, ಸಂದೀಪ್, ಚಂದ್ರಶೇಖರ್ ಹೇಳಿದರು.