ಕೊಳ್ಳೇಗಾಲ: ತಾಲೂಕಿನ ಸತ್ತೇಗಾಲದ ಕೋಟೆ ಗ್ರಾಮದಲ್ಲಿ ಯುಕವನೊಬ್ಬನಿಗೆ ಮೂವರ ಗುಂಪು ಹಲ್ಲೆ ನಡೆಸಿರುವ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮದ ಲಕ್ಷ್ಮಣ ನಾಯಕ ಎಂಬುವರ ಮಗ ನಾಗರಾಜ ನಾಯಕ (35)ಹಲ್ಲೆಗೊಳಗಾಗಿ ಗಾಯಗೊಂಡವರು. ಅದೇ ಗ್ರಾಮದ ರಂಗ, ತಾಯಮ್ಮ, ಹಲಗೂರು ಶಿವು ಹಲ್ಲೆ ನಡೆಸಿದ ಆರೋಪಿಗಳಾಗಿದ್ದಾರೆ. ಭಾನುವಾರ ರಾತ್ರಿ ನಾಗರಾಜ ನಾಯಕ ಎಂದಿನಂತೆ ಊಟ ಮಾಡಿ ಮನೆಯಲ್ಲಿ ಮಲಗಿದ್ದರು. ಈ ವೇಳೆ ಮನೆಗೆ ಬಂದ ರಂಗ, ಇವನ ಅಕ್ಕ ತಾಯಮ್ಮ, ಹಲಗೂರು ಶಿವು ಎಂಬುವರು ಯಾವುದೋ ಮಾತಿಗೆ ನಾಗರಾಜ ನಾಯಕನ ಮೇಲೆ ಜಗಳ ತೆಗೆದಿದ್ದಾರೆ. ಈ ವೇಳೆ ರಂಗ ನಾಗರಾಜನಾಯಕನ ತಲೆಗೆ ಕಲ್ಲಿನಿಂದ ಹೊಡೆದಿದ್ದು. ಇವನ ಜತೆಗೆ ತಾಯಮ್ಮ, ಹಲಗೂರು ಶಿವು ಕೂಡ ಹಲ್ಲೆ ಮಾಡಿದ್ದಾರೆ. ನಂತರ ಹಲ್ಲೆಗೊಳಗಾದ ನಾಗರಾಜ ನಾಯಕನನ್ನು ಅಕ್ಕಪಕ್ಕದವರು ಕೊಳ್ಳೇಗಾಲ ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಗಾಯಾಳು ಪೊಲೀಸರಿಗೆ ದೂರು ನೀಡಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.