ಜಿಲ್ಲೆ

ಕೆರೆಗಳ ಹೂಳು ತೆಗೆಸಲು ಕ್ರೀಯಾಯೋಜನೆ ಸಲ್ಲಿಸಿ

ಕಿರಣ್ ಮಾದರಹಳ್ಳಿ

ಕೊಳ್ಳೇಗಾಲ: ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಳ್ಳೇಗಾಲ, ಯಳಂದೂರು ಹಾಗೂ ಸಂತೇಮರಹಳ್ಳಿ ಉಪ ವಿಭಾಗಗಳ ಕಬಿನಿ ನಾಲೆಗಳ ದುರಸ್ತಿ ಹಾಗೂ ಕೆರೆಗಳ ಹೂಳು ತೆಗೆಸಿ ಅಭಿವೃದ್ಧಿ ಪಡಿಸಲು ಅಧಿಕಾರಿಗಳು ಕ್ರಿಯಾ ಯೋಜನೆಯನ್ನು (ಡಿಪಿಆರ್) ಸಲ್ಲಿಸಿದರೆ, ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸುವುದಾಗಿ ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು.

ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಶನಿವಾರ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ, ಸಂತೇಮರಹಳ್ಳಿ ಹಾಗೂ ಯಳಂದೂರು ಉಪ ವಿಭಾಗದ ಅಧಿಕಾರಿಗಳು ಮತ್ತು ಅಧೀಕ್ಷಕ ಇಂಜಿನಿಯರ್ ಮಹೇಶ್ ಅವರನ್ನು ಒಳಗೊಂಡ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.

ಈ ವ್ಯಾಪ್ತಿ ಯಲ್ಲಿ ಬರುವ ಕೆರೆಗಳಲ್ಲಿ ಹೂಳು ತೆಗೆಸಿ, ಸಂಪೂರ್ಣವಾಗಿ ಕೆರೆಗಳಿಗೆ ತುಂಬಿ, ನಾಲೆಗಳಲ್ಲಿ ನೀರು ಹರಿದು ಕಟ್ಟ ಕಡೆಯ ಜಮೀನಿಗೂ ಸಹ ನೀರು ತಲುಪುವಂತೆ ವ್ಯವಸ್ಥೆ ಮಾಡಲು ಅಧಿಕಾರಿಗಳು ಮುಂದಾಗಬೇಕು. ಕೆರೆ, ಕಾಲುವೆಗಳ ಅಭಿವೃದ್ಧಿ ಪಡಿಸಲು ಬದ್ದನಾಗಿದ್ದು, ಸರ್ಕಾರದ ಜತೆ ಚರ್ಚಿಸುವುದಾಗಿ ಹೇಳಿದರು.

ಸುಮಾರು 50 ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ವಿತರಣೆ ನಾಲೆಗಳು ಹಾಗೂ ಕೆರೆಗಳು ನಮ್ಮ ಭಾಗದಲ್ಲಿವೆ. ಇವುಗಳನ್ನು ದುರಸ್ತಿ ಪಡಿಸುವ ಹಾಗೂ ಹೂಳು ತೆಗೆಸುವ ಪ್ರಯತ್ನವನ್ನು ಅಧಿಕಾರಿಗಳು ಮಾಡಿಲ್ಲ. ಇದರಿಂದಾಗಿ ಕೆರೆ ಗಳಲ್ಲಿ ಗಿಡ ಗಂಟೆಗಳು ಬೆಳೆದು ಹೂಳು ತುಂಬಿ ನೀರು ಶೇಖರಣೆಯಾಗುವ ಪ್ರಮಾಣ ಕಡಿಮೆಯಾಗುತ್ತಿದೆ. ಶೇ.30 ರಷ್ಟು ನೀರು ಶೇಖರಣೆಯಾಗುತ್ತಿಲ್ಲ. ಜತೆಗೆ ಕಬಿನಿಯಿಂದ ವಿತರಣೆ ನಾಲೆಗಳ ಮೂಲಕ ನೀರು ಬಿಟ್ಟರು ಸಹ ನಾಲೆಗಳ ಸಂಪರ್ಕ ಕಡಿದುಕೊಂಡು ಸರಿಯಾಗಿ ನೀರು ಹರಿಯುತ್ತಿಲ್ಲ. ಹೀಗಾಗಿ ಇದನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಆಯಾಯ ಉಪವಿಭಾಗ ಇಂಜಿನಿಯರ್‌ಗಳು ಕ್ರಿಯಾ ಯೋಜನೆಯನ್ನು ತಯಾರು ಮಾಡಿ, ಅಧೀಕ್ಷಕ ಇಂಜಿನಿಯರ್ ಅವರಿಗೆ ನೀಡಿದರೆ, ಅವರು ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತಾರೆ. ಬಳಿಕ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರು, ಕಾಡಾ ಅಧ್ಯಕ್ಷರಿಗೆ ಒತ್ತಡ ಹಾಕಿ ಅನುದಾನವನ್ನು ಬಿಡುಗಡೆ ಮಾಡಿಸಿ, ಅಭಿವೃದ್ದಿ ಪಡಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳೋಣ ಎಂದರು.

ಅಧೀಕ್ಷಕ ಇಂಜಿನಿಯರ್ ಮಹೇಶ್ ಮಾತನಾಡಿ, ಸುವರ್ಣವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಣ್ಣೇಗಾಲ ಪಿಕ್‌ಅಪ್ ಮತ್ತು ಗಣಗನೂರು ಪಿಕ್‌ಆಪ್‌ಗಳನ್ನು ಉನ್ನತೀಕರಿಸಿ, ಅಭಿವೃದ್ದಿ ಪಡಿಸಿದರೆ, ನೀರು ಪೋಲಾಗುವುದು ತಪ್ಪುತ್ತದೆ. ಹೆಚ್ಚುವರಿ ನೀರನ್ನು ಕೆರೆಗಳಿಗೆ ತಲುಪವಂತೆ ಕಾಲುವೆಗಳನ್ನು ದುರಸ್ತಿಗೊಳಿಸುವುದರ ಮೂಲಕ ಮಾಡಬಹುದು ಎಂದು ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಹೊಂಗನೂರು ಚಂದ್ರು, ಮುಖಂಡ ತೋಟೇಶ್, ರಾಘವೇಂದ್ರ, ಹೊಂಗನೂರು ಚೇತನ್, ಉಪವಿಭಾಗಗಳ ಇಂಜಿನಿಯರ್ ಭಾಗವಹಿಸಿದ್ದರು.