ಜಿಲ್ಲೆ

ಶ್ರೀ ಲಕ್ಷ್ಮೀ ನಾರಾಯಣ ಸನ್ನಿಧಿಯಲ್ಲಿ ಉತ್ತರಾಯಣ ಆಚರಣೆ

ಎ. ಆರ್. ರಘುರಾಮ

ಕೊಳ್ಳೇಗಾಲ : ಪಟ್ಟಣದ ಕಾವೇರಿ ರಸ್ತೆ ಸಮೀಪವಿರುವ ಶ್ರೀ ಲಕ್ಷ್ಮೀ ನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ಮಕರ ಸಂಕ್ರಾಂತಿ ಹಬ್ಬ ಮತ್ತು ಉತ್ತರಾಯಣ ಪುಣ್ಯಕಾಲ ಆಚರಣೆ ಅಂಗವಾಗಿ ದೇವರ ವಿಗ್ರಹಕ್ಕೆ ಬೆಣ್ಣೆ ಅಲಂಕಾರ ಮಾಡಲಾಗಿತ್ತು. ವಿಶೇಷವಾಗಿ ದೇವಾಲಯದ ವೈಕುಂಠ ದ್ವಾರದ ಮೂಲಕ ಭಕ್ತರು ಪ್ರವೇಶಿಸಿ ಸ್ವಾಮಿಯ ದರ್ಶನ ಮಾಡಿದ್ದು ಭಕ್ತಿ-ಭಾವದ ಪ್ರತೀಕವಾಗಿತ್ತು. ಧನುರ್ಮಾಸಕ್ಕೆ ಮಂಗಳ ಹಾಡುವ ಪರ್ವಕಾಲದಲ್ಲಿ ಶ್ರೀ ಸ್ವಾಮಿಗೆ ಮುಂಜಾನೆಯಿಂದ ಸುಪ್ರಭಾತ ಸೇವೆ, ತೋಮಾಲ ಸೇವೆ, ಅಭಿಷೇಕ, ಮಹಾಮಂಗಳಾರತಿ ನೆರವೇರಿಸಲಾಯಿತು. ಧರ್ನುಮಾಸದ ಕೊನೆಯ ದಿನದ ಅಂಗವಾಗಿ ದೇವರಿಗೆ ಪೊಂಗಲ್ ನೈವೇದ್ಯ ಮಾಡಿ ನೂರಾರು ಭಕ್ತರಿಗೆ ವಿವರಿಸಲಾಯಿತು. ಉತ್ತರಾಯಣ ಪ್ರಾರಂಭದ ಕಾಲದ ಗೋಧೂಳಿ ಲಗ್ನದಲ್ಲಿ ದೇವಸ್ಥಾನದ ಸ್ವರ್ಗದ ಬಾಗಿಲು (ವೈಕುಂಠ ದ್ವಾರ) ತೆರೆದು ಉತ್ಸವಮೂರ್ತಿ ಹೊರತಂದು ರಾಜಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಈ ಸಂದರ್ಭ ಭಕ್ತರು ಉತ್ಸಮೂರ್ತಿಗೆ ಹಣ್ಣು, ಕಾಯಿ ನೈವೇದ್ಯ ಸಮರ್ಪಿಸಿದರು. ಪ್ರಧಾನ ಅರ್ಚಕ ಶೇಷಾದ್ರಿ ಭಟ್ಟ, ಸುದರ್ಶನ ಭಟ್ಟರ ನೇತೃತ್ವದಲ್ಲಿ ಶ್ರೀ ಲಕ್ಷ್ಮೀ ನಾರಾಯಣ ಸ್ವಾಮಿ ಪೂಜಾ ಕೈಂಕರ್ಯ ನೆರವೇರಿದವು. ದೇವಾಲಯ ಸಮಿತಿ ಪದಾಧಿಕಾರಿಗಳು, ನೂರಾರು ಭಕ್ತರು ಉತ್ಸವಕ್ಕೆ ಸಾಕ್ಷಿಯಾದರು.