ಕೊಳ್ಳೇಗಾಲ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಫೆಡರೇಷನ್ ವತಿಯಿಂದ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಯಿತು.
ತಾಲೂಕು ಕಚೇರಿಯ ಮುಂಭಾಗ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ನೂರಾರು ಸಂಖ್ಯೆಯಲ್ಲಿ ಸಮಾವೇಶಗೊಂಡು ಧಿಕ್ಕಾರ ಕೂಗಿದಲ್ಲದೇ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು. ನಂತರ ಸ್ಥಳಕ್ಕೆ ಬಂದ ಶಿರಸ್ತೇದಾರ್ ಕೃಪಾಕರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕಾಂಗ್ರೆಸ್ ಸರ್ಕಾರ ಘೋಷಿಸಿರುವ ಗ್ಯಾರಂಟಿಗಳ ಪೈಕಿ 6 ನೇ ಗ್ಯಾರಂಟಿಯಾದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಗೌರವಧನ ಹೆಚ್ಚಳ ಕೂಡಲೇ ಮಾಡಬೇಕು. ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಅನುಷ್ಠಾನಕ್ಕೆ ಕಾರ್ಯ ಕರ್ತೆಯರಿಗೆ 4 ವರ್ಷಗಳ ಹಿಂದೆ ನೀಡಿದ್ದ ಮೊಬೈಲ್ ಕಳಪೆಯಾಗಿದೆ. ಇದ್ದರಿಂದ ಸಮರ್ಪಕವಾಗಿ ಸರ್ವೇ ಕಾರ್ಯ ಮಾಡಲಾಗುತ್ತಿಲ್ಲ. ಆದ್ದರಿಂದ ಗುಣಮಟ್ಟ ಮೊಬೈಲ್ ನೀಡಬೇಕು ಎಂದು ಆಗ್ರಹಿಸಿದರು.
ಅಂಗನವಾಡಿ ಮಕ್ಕಳಿಗೆ ಟೆಂಡರ್ ಮೂಲಕ ಖರೀಸುತ್ತಿರುವ ಮೊಟ್ಟೆ ಕಳಪೆ ಗುಣಮಟ್ಟದಿಂದ ಕೂಡಿದೆ. ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಆದ್ದರಿಂದ ಮೊಟ್ಟೆ ಖರೀದಿ ಜವಾಬ್ದಾರಿಯನ್ನು ಬಾಲ ವಿಕಾಸ ಸಮಿತಿಗೆ ವಹಿಸಬೇಕು. ಬಹುತೇಕ ಜಿಲ್ಲೆಗಳಲ್ಲಿ ಅಂಗನವಾಡಿ ಕೇಂದ್ರಗಳ ಕಟ್ಟಡದ ಬಾಡಿಗೆಗಳನ್ನು ಕಟ್ಟಿಲ್ಲ. ಗ್ಯಾಸ್ ಹಾಗೂ ವಿದ್ಯುತ್ ಬಿಲ್ ಪಾವತಿಸಬೇಕಿದ್ದು ಇವೆಲ್ಲ ಅನನುಕೂಲ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಸಂಘದ ತಾಲೂಕು ಅಧ್ಯಕ್ಷೆ ಸರಳಾ ಪ್ರೇಮಕುಮಾರಿ, ಉಪಾಧ್ಯಕ್ಷೆ ಚಿಕ್ಕ ತಾಯಮ್ಮ, ಕಾರ್ಯದರ್ಶಿ ಕೆ.ವಿಜಯಲಕ್ಷ್ಮೀ, ಪದಾಧಿಕಾರಿಗಳಾದ ಮಹದೇವಮ್ಮ, ಸೌಭಾಗ್ಯಾ, ಶಾಂತಮ್ಮ, ಚಿಕ್ಕಮ್ಮಣಿ, ಚಂದ್ರಮ್ಮ, ರೋಜಾ ಮತ್ತಿತರಿದ್ದರು.