ಕೊಳ್ಳೇಗಾಲ: ತಾಲೂಕಿನ ಜಾಗೇರಿ ಬೂದಗಟ್ಟೆ ವಿಚಾರವಾಗಿ ರೈತ ಸಂಘ ಕಳೆದ 135 ದಿನಗಳಿಂದ ಮಲೆ ಮಹದೇಶ್ವರ ವನ್ಯ ಜೀವಿ ವಿಭಾಗದ ಡಿಎಫ್ಒ ಕಚೇರಿ ಮುಂದೆ ನಡೆಸುತ್ತಿದ್ದ ರೈತ ಚಳುವಳಿ ಮಂಗಳವಾರ ಅಂತ್ಯಗೊಂಡಿದೆ.
ಬೂದಗಟ್ಟೆ ದೊಡ್ಡಿಯ ಮೂರು ರೈತರ 13 ಎಕರೆ ಜಮೀನನ್ನು ಅರಣ್ಯ ಇಲಾಖೆಯ ವಶಪಡಿಸಿ ಕೊಂಡಿರುವುದಾಗಿ ರೈತರು ಬಿಸಿಲು, ಮಳೆ ,ಗಾಳಿ ಎನ್ನದೆ ಪ್ರತಿಭಟನೆ ನಡೆಸುತ್ತಿದ್ದರು. ಈ ವಿಚಾರವಾಗಿ ಸೋಮವಾರ ಉಸ್ತುವಾರಿ ಸಚಿವ ವಿ.ಸೋಮಣ್ಣ ಬೂದಗಟ್ಟೆ ದೊಡ್ಡಿಗೆ ಭೇಟಿ ನೀಡಿ ರೈತರ ಸಮಸ್ಯೆಯನ್ನು ತಿಂಗಳ ಒಳಗೆ ಸರಿಪಡಿಸುತ್ತೇವೆ ಎಂದು ಭರವಸೆ ಕೊಟ್ಟಿದ್ದರು. ಜಾಗೇರಿ ಸರ್ವೆ.ನಂ 174 ಅನ್ನು ಸರ್ವೆ ಮಾಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು.
ಅಂತೆಯೇ ಮಂಗಳವಾರ ಹನೂರಿಗೆ ವಿವಿಧ ಕಾಮಗಾರಿಗೆ ಚಾಲನೆ ನೀಡಲು ಬಂದಿದ್ದ ಮುಖ್ಯ ಮಂತ್ರಿ ಬಸವರಾಜು ಬೊಮ್ಮಾಯಿ ಅವರು ರೈತ ಮುಖಂಡರುಗಳ ಜತೆ ಚರ್ಚಿಸಿದ್ದು. ಜನವರಿ 20 ರ ಒಳಗೆ ಜಾಗೇರಿಯ ರೈತರ ಸಮಸ್ಯೆಗಳನ್ನು ಶಾಶ್ವತವಾಗಿ ಬಗೆಹರಿಸಿಕೊಡುವುದಾಗಿ ಕೊಟ್ಟ ಭರವಸೆ ಮೇರೆಗೆ ಇಂದು ರೈತ ಸಂಘದ ರಾಜ್ಯಾಧ್ಯಕ್ಷರ ಬಡಗಲಪುರ ನಾಗೇಂದ್ರ ಅವರು ಚಳುವಳಿಯನ್ನು ಅಂತ್ಯಗೊಳಿಸಿದ್ದಾರೆ.
ಈ ವೇಳೆ ಮಾತನಾಡಿದ ರಾಜ್ಯ ರೈತ ಸಂಘದ ಬಡಗಲ ಪುರ ನಾಗೇಂದ್ರ, ಜಾಗೇರಿ ಹೋರಾಟಕ್ಕೆ ಸರ್ಕಾರ ರೈತರ ಸ್ಪಂದಿಸಿದ್ದು ಪರಿಣಾಮ ತಾತ್ಕಾಲಿಕವಾಗಿ ಚಳುವಳಿಯನ್ನು ಅಂತ್ಯಗೊಳಿಸಿದ್ದೇವೆ.ಒಂದು ವೇಳೆ ಕೊಟ್ಟ ಮಾತಿನಂತೆ ಸರ್ಕಾರ ನಡೆದು ಕೊಳ್ಳದಿದ್ದರೆ ಅಹಿಂಸ ಮಾರ್ಗದಲ್ಲಿ ಚಳುವಳಿ ಇದೇ ಸ್ಥಳದಲ್ಲಿ ಮುಂದುವರೆಯುತ್ತದೆ ಎಂದು ಎಚ್ಚರಿಸಿದರು.
ಹೋರಾಟಕ್ಕೆ ಬೆಂಬಲ ಸೂಚಿಸಿದ್ದ ಮಾಧ್ಯಮದವರು, ವಿವಿಧ ಜಿಲ್ಲೆಯ ರೈತ ಮುಖಂಡರುಗಳು, ಪೊಲೀಸರು, ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದರು. ಐತಿಹಾಸಿಕ ಈ ಚಳುವಳಿಗೆ ಇತರೆ ಜಿಲ್ಲೆಯ ರೈತ ಸಂಘದವರು ಹಾಗೂ ಶಾಸಕ ಆರ್.ನರೇಂದ್ರ, ಎನ್.ಮಹೇಶ್ ಉಸ್ತವಾರಿ ಸಚಿವ ಸೋಮಣ್ಣರವರಿಗೆ ಹಾಗೂ ಸ್ಥಳೀಯ ರೈತ ಸಂಘದ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಹೇಶ್ ಪ್ರಭು, ರೈತರುಗಳಾದ ಶೈಲೇಂದ್ರ, ಮಧುವನಹಳ್ಳಿ ಬಸವರಾಜು, ಜೋಸೆಫ್, ಚಾರ್ಲಿ, ಜಾನ್ ಕೆನಡಿ, ಚಂದ್ರಭೋವಿ, ಚೌಡ ಭೋವಿ, ವೀರಣ್ಣಭೋವಿ, ಮಾದಮ್ಮ ಸೇರಿದಂತೆ ಇತರರು ಇದ್ದರು.