ಜಿಲ್ಲೆ

ಬಿಜೆಪಿ ಮುಖಂಡನ ಮೇಲೆ ಹಲ್ಲೆ

ಕೊಳ್ಳೇಗಾಲ: ಪಟ್ಟಣದ ದೇವಾಂಗ ಪೇಟೆಯ ಪಂಚರಂಗಿ ವೃತ್ತದ ಬಳಿ ಯುವಕರ ಗುಂಪೊಂದು ಬಿಜೆಪಿ ಯುವಮೋರ್ಚಾ ನಗರ ಮಂಡಲ ಅಧ್ಯಕ್ಷ ಕಿರಣ್ ಅವರ ಹಲ್ಲೆ ಮಾಡಿರುವ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರವೀಣ್, ಪ್ರಜ್ವಲ್, ಚಂದ್ರು, ಪ್ರಶಾಂತ್ ಹಾಗೂ ಇನ್ನಿಬ್ಬರು ಹಲ್ಲೆ ಮಾಡಿರುವ ಆರೋಪಿಗಳಾಗಿದ್ದಾರೆ. ದೇವಾಂಗ ಪೇಟೆಯಲ್ಲಿರುವ ಮಳಿಗೆ ಮಾರಮ್ಮ ದೇಗುಲದಲ್ಲಿ ತಂಪು ಹಬ್ಬ ಇದ್ದ ಕಾರಣ ಮಂಗಳವಾರ ರಾತ್ರಿ ಕಿರಣ್ ದೇವಾಲಯದ ಎಲ್ಲ ಕಾರ್ಯವನ್ನು ಮುಗಿಸಿಕೊಂಡು ಸ್ನೇಹಿತ ನಿಖಿಲ್ ಜತೆ ಪಂಚರಂಗಿ ಸರ್ಕಲ್‌ಗೆ ಬಂದಿದ್ದಾರೆ. ಈ ವೇಳೆ ಗುಂಪುಗೂಡಿಕೊಂಡು ಪ್ರವೀಣ್, ಪ್ರಜ್ವಲ್, ಚಂದ್ರು, ಪ್ರಶಾಂತ್ ಸೇರಿದಂತೆ ಇನ್ನಿಬ್ಬರು ಜೋರು ಧ್ವನಿಯಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಕಿರಣ್ ಕೂಗಾಡಬೇಡಿ ಎಂದು ಹೇಳಿದ್ದಕ್ಕೆ ಕುಪಿತಗೊಂಡ ಆರೋಪಿಗಳು ಏಕಾಏಕಿ ಕಬ್ಬಿಣದ ರಾಡು, ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆ.

ನಗರದ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಗಾಯಾಳು ಚಿಕಿತ್ಸೆಗೆ ದಾಖಲಾಗಿದ್ದಾರೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ತನಿಖೆ ಮುಂದುವರಿಸಿದ್ದಾರೆ. ಉಪವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಯುವಮೋರ್ಚಾ ನಗರ ಮಂಡಲ ಅಧ್ಯಕ್ಷ ಕಿರಣ್‌ನನ್ನು ಮಾಜಿ ಶಾಸಕ ಎನ್.ಮಹೇಶ್ ಬುಧವಾರ ರಾತ್ರಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಆರೋಪಿಗಳ ವಿರುದ್ಧ ಕ್ರಮಕ್ಕೆ ಅವರು ಆಗ್ರಹಿಸಿದರು.