ಜಿಲ್ಲೆ

ಕಾಳ್ಗಿಚ್ಚಿಗೆ ನೂರಾರು ಎಕರೆ ಅರಣ್ಯ ನಾಶ

ಕೊಳ್ಳೇಗಾಲ: ತಾಲೂಕಿನ ಕೆಂಪನಪಾಳ್ಯ ಗ್ರಾಮದ ಹೊರವಲಯದಲ್ಲಿರುವ ಮುದುಮಲೆ ಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡು ನೂರಾರು ಎಕರೆ ಅರಣ್ಯ ಪ್ರದೇಶ ಬೆಂಕಿಯ ಕೆನ್ನಾಲಿಗೆ ಅಹುತಿಯಾಗಿದೆ.

ಮುದುಮಲೆ ಗುಡ್ಡದ 3 ಕಡೆಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಹೆಚ್ಚಿನ ಪ್ರಮಾಣದಲ್ಲಿಯೇ ಕಾಡು ಬೆಂಕಿಗೆ ಸುಟ್ಟು ಹೋಗಿದೆ. ಶನಿವಾರ ರಾತ್ರಿ ಸುಮಾರು 9.30 ರಲ್ಲಿ ಬೆಂಕಿ ಕಾಣಿಸಿಕೊಂಡ ಮಾಹಿತಿ ತಿಳಿದ ಅರಣ್ಯ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಮುಂದಾದರು. ಗುಡ್ಡದಲ್ಲಿ ಹೆಚ್ಚಾಗಿ ಕುರುಚಲು ಪ್ರದೇಶ ಹೆಚ್ಚಾದ ಪರಿಣಾಮ ನೋಡು ನೋಡುತ್ತಲೆ ಬೆಂಕಿ ಆವರಿಸಿತು. ಅಲ್ಲಿಂದ ಮರಗಿಡಗಳು ಸುಟ್ಟು ಹೋದವು. ಇದಕ್ಕೂ ಮೊದಲು ಎರಡ್ಮೂರು ಭಾರಿ ಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಮೊಲ, ಜಿಂಕೆ ಇನ್ನಿತರ ಕಾಡು ಪ್ರಾಣಿಗಳು ಸಿಲುಕಿದ್ದವು. ಅರಣ್ಯ ಸಿಬ್ಬಂದಿ ರಾತ್ರಿ 1 ಗಂಟೆಯವರೆವಿಗೂ ಬೆಂಕಿ ನಂದಿಸಿದರು.

ಪದೇ ಪದೇ ಗುಡ್ಡದಲ್ಲಿ ಬೆಂಕಿ ಅವಘಡಗಳು ನಡೆಯುತ್ತಿದ್ದು, ವನ್ಯಜೀವಿಗಳಿಗೆ ಪ್ರಾಣಕ್ಕೆ ಕುತ್ತು ಬರುತ್ತಿದೆ. ಅದಲ್ಲದೇ, ಕೆಂಪನಪಾಳ್ಯ, ಮುಡಿಗುಂಡ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಕಾಡಿಗೆ ಬೆಂಕಿ ಬಿದ್ದರೆ ಚಿರತೆ ನಾಡು ಸೇರುತ್ತದೆ. ಈ ವೇಳೆ ಜನ ಸಾಮಾನ್ಯರಿಗೆ ತೊಂದರೆಯಾದರೆ ಯಾರು ಹೊಣೆ ಮತ್ತೆ ಹೀಗಾಗದಂತೆ ಕ್ರಮವಹಿಸಬೇಕೆಂದು ರೈತರು ಹಾಗೂ ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.