ಜಿಲ್ಲೆ

ಶಿವರಾತ್ರಿ ರಾಜೇಂದ್ರ ಶ್ರೀಗಳಿಂದ ಲಕ್ಷಾಂತರ ಜನರಿಗೆ ವಿದ್ಯಾದಾನ

ಕಿರಣ್ ಮಾದರಹಳ್ಳಿ

ಕೊಳ್ಳೇಗಾಲ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆಯ ಸಹಯೋಗದೊಂದಿಗೆ ಬುಧವಾರ ತಾಲೂಕಿನ ಚಿಲಕವಾಡಿಯಲ್ಲಿ ವಚನ ಗಾಯನ ಸ್ಪರ್ಧೆ, ವಚನ ದಿನಾಚರಣೆ ಹಾಗೂ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಜಯಂತಿ ಹಾಗೂ ದತ್ತಿ ಕಾರ್ಯಕ್ರಮ ನಡೆಯಿತು.

ಚಿಲಕವಾಡಿ ಗ್ರಾಮದ ಶ್ರೀಶಂಭುಲಿಂಗೇಶ್ವರ ವಿದ್ಯಾಸಂಸ್ಥೆಯಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ವಿದ್ಯಾಸಂಸ್ಥೆಯ ಕಾರ್ಯದರ್ಶಿ ತೋಟೇಶ್ ಉದ್ಘಾಟಿಸಿದರು. ಮುಡಿಗುಂಡ ವಿರಕ್ತ ಮಠಾಧ್ಯಕ್ಷ ಶ್ರೀಕಂಠಸ್ವಾಮೀಜಿ ಮಾತನಾಡಿ, ಸೇವೆ ಗೌರವ ತರುತ್ತದೆ ಎಂಬುದಕ್ಕೆ ಸಾಕ್ಷಿಯಾಗಿ ಡಾ.ಶಿವರಾತ್ರಿ ರಾಜೇಂದ್ರ ಶ್ರೀಗಳು ನೆನಪಿಗೆ ಬರುತ್ತಾರೆ. ಅವರು ಹೆಚ್ಚು ಓದಿದವರಲ್ಲ. ಆದರೂ ಮೈಸೂರು ಹಾಗೂ ಚಾಮರಾಜನಗರ ಪ್ರಾಂತ್ಯದ ಮಕ್ಕಳಿಗೆ ಅನುಕೂಲವಾಗಲಿ ಎಂದು ವಿದ್ಯಾಸಂಸ್ಥೆ, ವಸತಿಗೃಹಗಳು, ಹೆಣ್ಣು ಮಕ್ಕಳಿಗೆ ಪ್ರತ್ಯೇಕ ವಿದ್ಯಾರ್ಥಿನಿಲಯಗಳನ್ನು ತೆರೆದು ಲಕ್ಷಾಂತರ ಜನರಿಗೆ ವಿದ್ಯಾದಾನ ಮಾಡಿದ್ದಾರೆ. ಜೆಎಸ್‌ಎಸ್ ಸಂಸ್ಥೆ ಬೃಹದಾಕಾರವಾಗಿ ಬೆಳೆದು ಮೆಡಿಕಲ್, ಇಂಜಿನಿಯರ್ ಕಾಲೇಜುಗಳನ್ನು ತೆರೆದು ಉನ್ನತ ಹುದ್ದೆಗಳನ್ನು ಕಲ್ಪಿಸಿ ಕೊಟ್ಟ ಇಂತಹ ಶ್ರೀಗಳನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ದತ್ತಿ ನೀಡಿದ್ದ ಎಪಿಎಸ್ ಜವಳಿ ಅಂಗಡಿ ಮಾಲೀಕ ದೇವೇಂದ್ರಗುಪ್ತ ಅವರ ಕೊಡುಗೆಯನ್ನು ಪ್ರಶಂಸಿಸಿದರು. ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗರಾಜು ಮಾತನಾಡಿ, ವಿದ್ಯಾರ್ಥಿನಿಯರು ವಚನ ಸಾಹಿತ್ಯದ ಬಗ್ಗೆ ಹೆಚ್ಚಿನ ಗಮನಹರಿಸಿ ವಚನ ರಚಿಸುವ ಕಲೆಯನ್ನು ರೂಢಿಸಿಕೊಳ್ಳಬೇಕು. ಅಕ್ಕ ಮಹಾದೇವಿ ಅವರ ನೆನಪು ನಿಮ್ಮಲ್ಲಿ ಬಂದರೆ ವಚನ ಸಾಹಿತ್ಯ ರಚನೆ ಸುಲಭವಾಗುತ್ತದೆ ಎಂದರು.

ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ಜೀವನ ಮತ್ತು ಸಾಧನೆ ಕುರಿತು ಕೆಸ್ತೂರು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಶಿವಕುಮಾರಸ್ವಾಮಿ ಉಪನ್ಯಾಸ ನೀಡಿದರು. ವಚನ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಣ ಸಂಸ್ಥೆಯ ಖಜಾಂಚಿ ತೋಟದಪ್ಪ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ರೂಪಾ ತೋಟೇಶ್, ಕಾರ್ಯದರ್ಶಿ ಗೀತಾ ಮಂಜುನಾಥ್, ದತ್ತಿ ದಾನಿ ಎಪಿಎಸ್ ಮಾಲೀಕ ಪ್ರಕಾಶ್, ಗೌರಿ ಪ್ರಕಾಶ್, ಹೇಮಾವತಿ, ಮಹೇಶ್ ಮತ್ತಿತರರಿದ್ದರು.