ಕೊಳ್ಳೇಗಾಲ: ಪಟ್ಟಣದ ಬಸ್ ನಿಲ್ದಾಣದ ಪ್ರವೇಶ ಹಾಗೂ ನಿರ್ಗಮನ ದ್ವಾರದಲ್ಲಿ ನಿಯಮ ಉಲ್ಲಂಘಿಸಿ ದ್ವಿಚಕ್ರ ವಾಹನ ನಿಲುಗಡೆ ಮಾಡಲಾಗುತ್ತಿದ್ದು, ಬಸ್‌ಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ.
ನಿಲ್ದಾಣ ಪ್ರವೇಶ ನೀಡುವ ಬಸ್‌ಗಳು ಡಾ.ವಿಷ್ಣುವರ್ಧನ್ ರಸ್ತೆಯಿಂದ ಆಗಮಿಸುತ್ತವೆ. ಶಾಂತಿ ಚಿತ್ರಮಂದಿರದ ಮುಂದೆ ಹಾದು ಹೋಗಿರುವ ಹೆದ್ದಾರಿ (209) ಕಡೆಗೆ ಬಸ್‌ಗಳು ನಿರ್ಗಮಿಸುತ್ತವೆ. ಈ ಎರಡು ದ್ವಾರಗಳು ಕಿರಿದಾಗಿರುವುದರಿಂದ ಬಸ್ ಚಾಲಕರು ಎಚ್ಚರದಿಂದ ನಿಲ್ದಾಣದೊಳಗೆ ಬಸ್ ಚಲಾಯಿಸಿಕೊಂಡು ಬರಬೇಕಾದ ಪರಿಸ್ಥಿತಿ ಇದೆ.
ಹೀಗಿರುವಾಗ ಎರಡು ದ್ವಾರಗಳಲ್ಲಿ ಪ್ರತಿನಿತ್ಯ ನಿಯಮ ಉಲಂಘಿಸಿ ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಾಲಕರು ನಿಲ್ದಾಣದೊಳಗೆ ಬಸ್ ತರಲು ಮತ್ತು ನಿಲ್ದಾಣದಿಂದ ತೆರಳಲು ಪ್ರಯಾಸ ಪಡಬೇಕಿದೆ.
ನಿಲ್ದಾಣದೊಳಗೆಯೇ ವಾಹನ ನಿಲುಗಡೆ ಮಾಡುವುದರಿಂದ ಸಾರ್ವಜನಿಕರು ವಾಹನಗಳ ಮೇಲೆ ಕುಳಿತುಕೊಳ್ಳುವುದು, ಗುಂಪುಗಟ್ಟಿ ನಿಲ್ಲುವುದು ಸಾಮಾನ್ಯವಾಗಿದೆ. ಬಸ್ ಚಾಲಕ ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತ ಸಂಭವಿಸಬಹುದು.
ಈ ಹಿಂದೆ ಬಸ್ ನಿಲ್ದಾಣದ ತಳ ಮಹಡಿಯಲ್ಲಿ ಪಾರ್ಕಿಂಗ್ ಸೇವೆ ಒದಗಿಸಲಾಗಿರಲಿಲ್ಲ. ಈ ವೇಳೆ ಬಸ್ ನಿಲ್ದಾಣ, ರಸ್ತೆ ಬದಿಗಳಲ್ಲಿ ಬೈಕ್ ಸವಾರರು ವಾಹನ ನಿಲ್ಲಿಸುತ್ತಿದ್ದರು. ಆದರೀಗ, ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಶುಲ್ಕ ಸಹಿತ ಪಾರ್ಕಿಂಗ್ ಸೇವೆ ಒದಗಿಸಿದ್ದಾರೆ. ಹೀಗಿದ್ದರೂ ಕೆಲವರು ಬಸ್ ನಿಲ್ದಾಣದೊಳಗೆ ವಾಹನಗಳನ್ನು ನಿಲ್ಲಿಸುವುದನ್ನು ತಪ್ಪಿಸಿಲ್ಲ. ಈ ಬಗ್ಗೆ ಕ್ರಮ ವಹಿಸಬೇಕಾದ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ. ನಿಲ್ದಾಣದೊಳಗೆ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದರೂ ಸರಿಪಡಿಸುವ ಗೋಜಿಗೆ ಹೋಗುತ್ತಿಲ್ಲ. ಈ ಅವ್ಯವಸ್ಥೆಗೆ ಜನ ಸಾಮಾನ್ಯರು ಕಿಡಿಕಾರುತ್ತಿದ್ದಾರೆ.
ಸಂಚಾರಕ್ಕೆ ಅಡಚಣೆ: ಬಸ್ ನಿಲ್ದಾಣ ಪ್ರವೇಶ ಹಾಗೂ ನಿರ್ಗಮನ ಎರಡೂ ಬದಿಯಿಂದಲೂ ಪ್ರಯಾಣಿಕರು ಪ್ರವೇಶ ಪಡೆಯುತ್ತಾರೆ. ಈ ಸಂದರ್ಭದಲ್ಕಿ ನಿಲುಗಡೆಗೊಳ್ಳುವ ಬೈಕ್‌ಗಳಿಂದ ಜನರಿಗೂ ತೊಂದರೆ ಆಗುತ್ತಿದೆ. ಬಸ್ ಸಂಚಾರವೂ ಕಷ್ಟವಾಗಿದೆ. ಸರ್ಕಾರಿ ಹಾಗೂ ಖಾಸಗಿ ಎರಡು ಬಸ್‌ಗಳು ನಿಲ್ದಾಣದಲ್ಲಿ ಸೇವೆ ಒದಗಿಸುತ್ತಿರುವುದರಿಂದ ಚಾಲಕರು ಬಸ್‌ಗಳನ್ನು ಸಲೀಸಾಗಿ ತರಲು ಸಾಧ್ಯವಾಗುತ್ತಿಲ್ಲ.
ವಿಶೇಷ ದಿನಗಳಲ್ಲಿ ಸಂಕಷ್ಟ:
ಕೊಳ್ಳೇಗಾಲ ಉಪ ವಿಭಾಗ ಕೇಂದ್ರವಾಗಿದೆ. ರೇಷ್ಮೆ ಹಾಗೂ ವ್ಯಾಪಾರೋದ್ಯಮಕ್ಕೂ ಹೆಸರಾಗಿದೆ. ಅಲ್ಲದೆ, ಮಲೆ ಮಹದೇಶ್ವರಬೆಟ್ಟದಲ್ಲಿ ದೀಪಾವಳಿ, ಯುಗಾದಿ ಅಮಾವಾಸ್ಯೆ ಜಾತ್ರೆಗಳು, ಚಿಕ್ಕಲ್ಲೂರು ಜಾತ್ರೆ, ಬಿಳಿಗಿರಿರಂಗನ ಬೆಟ್ಟ ಜಾತ್ರೆಗಳ ಸಂದರ್ಭದಲ್ಲಿ ನಿತ್ಯದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುಗುತ್ತದೆ. ಕಿರಿದಾದ ಬಸ್ ನಿಲ್ದಾಣದಲ್ಲಿ ಖಾಸಗಿ ಹಾಗೂ ಸರ್ಕಾರಿ ಬಸ್‌ಗಳೆರಡು ಒಟ್ಟಿಗೆ ಕಾರ್ಯ ನಿರ್ವಹಿಸಿರುವುದರಿಂದ ಬಸ್ ನಿಲುಗಡೆಗೆ ಸ್ಥಳ ಅಭಾವವಿದೆ. ನಿಲ್ದಾಣವನ್ನೆಲ್ಲ ಬಸ್‌ಗಳೇ ಆವರಿಸಿಕೊಳ್ಳುವುದರಿಂದ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ನೆಮ್ಮದಿಯಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ. ನಿಲ್ದಾಣದೊಳಗಿರುವ ಐಡಿಎಸ್‌ಎಂಟಿ ಮಳಿಗೆಗಳು ವ್ಯಾಪಾರ ನಡೆಯುತ್ತಿರುವುದರಿಂದ ಜನರು ಎರಡು ದ್ವಾರಗಳಲ್ಲಿಯೇ ನಿಂತು ಕಾಲ ದೂಡುತ್ತಾರೆ. ಇವೆಲ್ಲದರ ನಡುವೆ ದ್ವಿಚಕ್ರ ವಾಹನಗಳ ಪಾರ್ಕಿಂಗ್ ಸಂಚಾರಕ್ಕೆ ಅಡಚಣೆ ಮಾಡುತ್ತಿದೆ.
ಆರ್.ಒ. ಪ್ಲಾಂಟ್ ಸ್ಥಳಾಂತರ:
ಈ ಹಿಂದೆ ನಿಲ್ದಾಣದ ಪ್ರವೇಶ ದ್ವಾರದಲ್ಲಿಯೇ ಆರ್.ಒ. ಪ್ಲಾಂಟ್ ಇರಿಸಿಕೊಳ್ಳಲಾಗಿತ್ತು. ಇದು ಸಾರ್ವಜನಿಕರು ಆರ್.ಒ. ಪ್ಲಾಂಟ್ ಹಿಂದೆಯೇ ವಾಹನಗಳನ್ನು ಮರೆಯಾಗಿ ನಿಲ್ಲಿಸಲು ಸುಲಭವಾಗಿತ್ತು. ಆರ್.ಒ.ಪ್ಲಾಂಟ್ ಬಸ್‌ಗಳ ಸಂಚಾರಕ್ಕೆ ಇಕ್ಕಟ್ಟಾಗಿದ್ದರಿಂದ ನಗರಸಭೆ ಸಾಮಾನ್ಯ ಸಭೆಯಲ್ಲಿ ಕೌನ್ಸಿಲ್ ತೀರ್ಮಾನ ತೆಗೆದುಕೊಂಡು ಆರ್.ಒ.ಪ್ಲಾಂಟ್ ಬಸ್ ನಿಲ್ದಾಣದೊಳಗಡೆಗೆ ಸ್ಥಳಾಂತರ ಮಾಡಲಾಗಿದೆ. ಈ ಕ್ರಮದಿಂದಾದರೂ ಮರೆಯಾಗಿ ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನಗಳ ಹಾವಳಿ ತಪ್ಪುತ್ತದೆ ಎಂದು ಭಾವಿಸಲಾಗಿತ್ತು. ಆದರೆ, ಈಗಲೂ ವಾಹನಗಳ ನಿಲುಗಡೆ ನಿಂತಿಲ್ಲ.
ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇದೆ. ಅದರೂ ಬಸ್ ನಿಲ್ದಾಣದೊಳಗೆ ವಾಹನ ನಿಲುಗಡೆ ಮಾಡಲಾಗುತ್ತಿದೆ. ಈ ಬಗ್ಗೆ ಕ್ರಮವಹಿಸಲು ನಮಗಿಂತಲೂ ಪೊಲೀಸ್ ಇಲಾಖೆ ಕ್ರಮ ವಹಿಸಬೇಕಿದೆ. ಕೆಎಸ್‌ಆರ್‌ಟಿಸಿ ಕಡೆಯಿಂದ ಪೊಲೀಸ್ ಇಲಾಖೆ ಪತ್ರ ಬರೆದು ನಿಯಮ ಉಲಂಘಿಸಿ ವಾಹನ ನಿಲುಗಡೆ ಮಾಡುವವರ ಮೇಲೆ ಕ್ರಮ ವಹಿಸಲು ಕೋರಲಾಗುವುದು.ಅಶೋಕ್, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ, ಚಾಮರಾಜನಗರ
ಬಸ್ ನಿಲ್ದಾಣದೊಳಗೆ ವಾಹನ ನಿಲುಗಡೆ ಮಾಡುವವರ ವಿರುದ್ಧ ಕ್ರಮ ವಹಿಸಲಾಗುವುದು. ಪೊಲೀಸ್ ಸಿಬ್ಬಂದಿಯಿಂದ ವಾಹನ ನಿಲುಗಡೆ ಮಾಡದಂತೆ ಸಾರ್ವಜನಿಕರಿಗೆ ಸೂಚನೆ ನೀಡಲಾಗುವುದು.ಎಂ.ಧರ್ಮೇಂದ್ರ, ಡಿವೈಎಸ್ಪಿ, ಕೊಳ್ಳೇಗಾಲ ಉಪ ವಿಭಾಗ
ಬಸ್ ನಿಲ್ದಾಣದೊಳಗೆ ನಿಲ್ಲುವ ದ್ವಿಚಕ್ರ ವಾಹನಗಳಿಂದ ನಿತ್ಯ ಕಿರಿಕಿರಿ ಉಂಟಾಗಿದೆ. ಈ ಬಗ್ಗೆ ಕೆಎಸ್‌ಆರ್‌ಟಿಸಿಯಾಗಲಿ, ಪೊಲೀಸ್ ಇಲಾಖೆಯಾಗಲಿ ಕ್ರಮ ವಹಿಸಿಲ್ಲ. ಬಸ್ ನಿಲ್ದಾಣದಲ್ಲಿರುವ ಪಾರ್ಕಿಂಗ್ ಶುಲ್ಕ ದುಬಾರಿಯಾದ ಕಾರಣ ಜನರು ವಾಹನಗಳನ್ನು ನಿಲ್ದಾಣದೊಳಗೆ ಅಡ್ಡಾದಿಡ್ಡಿ ನಿಲ್ಲಿಸುತ್ತಿದ್ದಾರೆ. ಕೆಎಸ್‌ಆರ್‌ಟಿಸಿ ಹಾಗೂ ನಗರಸಭೆ ಈ ಬಗ್ಗೆ ಗಮನ ಹರಿಸಬೇಕು, ಶುಲ್ಕವನ್ನು ತಗ್ಗಿಸಬೇಕು.ರವಿ, ಕೊಳ್ಳೇಗಾಲ ನಿವಾಸಿ