ಕೊಳ್ಳೇಗಾಲ: ನಗರಸಭಾ ವ್ಯಾಪ್ತಿಯ 31ವಾರ್ಡ್‌ಗಳಲ್ಲಿ ಅಳವಡಿಸಿರುವ ಮಾಹಿತಿ ಫಲಕಗಳು ಬರಿದಾಗಿದ್ದು, ಕೆಲವು ಕಡೆಗಳಲ್ಲಿ ಮರಿದು ಬಿದ್ದಿವೆ. ಇಷ್ಟಾದರೂ ಅವನ್ನು ಸರಿಪಡಿಸುವ ಗೋಜಿಗೆ ನಗರಸಭೆ ಅಧಿಕಾರಿಗಳು ಮುಂದಾಗಿಲ್ಲ.
31 ವಾರ್ಡ್‌ಗಳ ರಸ್ತೆ ಬದಿಗಳಲ್ಲಿ ಕಳೆದ 6 ವರ್ಷಗಳ ಹಿಂದೆಯೇ ಮಾಹಿತಿ ಫಲಕಗಳನ್ನು ಅಳವಡಿಸುವ ಕೆಲಸವನ್ನು ನಗರಸಭೆ ಕೈಗೊಂಡಿತ್ತು. 500ಕ್ಕೂ ಹೆಚ್ಚು ನಾಮಫಲಗಳನ್ನು ನೆಡಲಾಗಿತ್ತು. ಅದರಲ್ಲಿ, ವಾರ್ಡ್ ಸಂಖ್ಯೆ, ಹೆಸರು, ಸಂಸದರು, ಶಾಸಕರ, ವಾರ್ಡ್ ಸದಸ್ಯರ ಮಾಹಿತಿಯನ್ನು ಬರೆಯಲಾಗಿತ್ತು. ಇದರಿಂದ ಜನರಿಗೆ ಬಡಾವಣೆಗಳ ಸಂಪೂರ್ಣ ಮಾಹಿತಿ ಲಭ್ಯವಾಗುತ್ತಿತ್ತು.
ಇದೀಗ ಎಲ್ಲ ಬೋರ್ಡ್‌ಗಳು ಬರಿದಾಗಿವೆ. 2018ರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಮಾದರಿ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಬೋರ್ಡ್‌ಗಳಲ್ಲಿ ಬರೆದ ಸಂಸದರು, ಶಾಸಕರು ಇನ್ನಿತರ ಮಾಹಿತಿಗೆ ಸಂಪೂರ್ಣ ಬಿಳಿ ಬಣ್ಣವನ್ನು ತುಂಬಲಾಗಿತ್ತು. ಆದರೆ, ಚುನಾವಣೆ ಮುಕ್ತಾಯಗೊಂಡು ನೂತನ ಶಾಸಕರಾಗಿ ಎ.ಆರ್.ಕೃಷ್ಣಮೂರ್ತಿ, ಸಂಸದರಾಗಿ ಸುನಿಲ್ ಬೋಸ್ ಚುನಾಯಿತರಾಗಿದ್ದಾರೆ.
ಬೋರ್ಡ್‌ಗಳಿಗೆ ಬಿಳಿ ಬಣ್ಣ ಬಳಿದು 1 ವರ್ಷ ಕಳೆದಿದೆ. ನಗರಸಭೆ ಸದಸ್ಯರ ಆಡಳಿತ ಅವಧಿ ಇನ್ನು 1 ವರ್ಷ ಮಾತ್ರ ಉಳಿದಿದೆ. ಆದರೂ ನಗರಸಭೆ ಅಧಿಕಾರಿಗಳಿಗೆ ಮಾಹಿತಿ ಫಲಕಗಳ ಮೇಲೆ ಗಮನವೇ ಇಲ್ಲ. ಇದರಿಂದ ಸಾರ್ವಜನಿಕರಿಗೆ ಬಡಾವಣೆಗಳ ಮಾಹಿತಿ ಸಿಗುತ್ತಿಲ್ಲ. ಖಾಲಿ ಬೋರ್ಡ್‌ಗಳನ್ನು ನೋಡಿದ ಸಾರ್ವಜನಿಕರು ನಗರಸಭೆ ಆಡಳಿತ ವೈಖರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮಹರಿಸಬೇಕು. ಬೋರ್ಡ್‌ಗಳಲ್ಲಿ ಮಾಹಿತಿ ತುಂಬಿಸಬೇಕು. ಬಿದ್ದ ಬೋರ್ಡ್‌ಗಳನ್ನು ಮತ್ತೆ ಅಳವಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮುರಿದು ಬಿದ್ದ ಬೋರ್ಡ್‌ಗಳು: ನಗರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ಅನುಕೂಲಕ್ಕೆ ಅಳವಡಿಸಿರುವ ನಾಮಫಲಕ ಬೋರ್ಡ್‌ಗಳು ಶೋಚನೀಯ ಸ್ಥಿತಿಯಲ್ಲಿವೆ. ಕೆಲವಡೆ ಭೂಮಿಗೆ ನೆಟ್ಟಿರುವ ಬೋರ್ಡ್‌ಗಳು ಬುಡದಲ್ಲಿಯೇ ಸಡಿಲಗೊಂಡು ಬೀಳುವ ಹಂತದಲ್ಲಿವೆ. ಇನ್ನು ಕೆಲವು ಕಡೆಗಳಲ್ಲಿ ಬೋರ್ಡ್‌ಗಳು ಕೆಳಗೆ ಮುರಿದು ಬಿದ್ದು ನೆಲವನ್ನು ಸೇರಿವೆ. ಆದರೂ ನಗರಸಭೆ ಅಧಿಕಾರಿಗಳು ಇದನ್ನು ಕಣ್ಣಾರೆ ಕಂಡರೂ ಜಾಣಕುರುಡು ಪ್ರದರ್ಶನ ಮಾಡುತ್ತಿದ್ದಾರೆ. ಪಟ್ಟಣ ಅಭಿವೃದ್ಧಿಪಡಿಸುವುದಕ್ಕಾಗಿ ಲಕ್ಷಾಂತರ ರೂ.ವ್ಯಯಿಸಿ ನಾಮಫಲಕ ಅಳವಡಿಕೆ ಕಾಮಗಾರಿ ಉದ್ದೇಶವು ಅರ್ಥವನ್ನೇ ಕಳೆದುಕೊಂಡಿದೆ.
ಕೊಳ್ಳೇಗಾಲ ನಗರಸಭೆ ವ್ಯಾಪ್ತಿಯ ವಾರ್ಡ್ ಮಾಹಿತಿ ನಾಮಫಲಕ ಬರಿದಾಗಿವೆ. ನೂತನ ಶಾಸಕರು ಕ್ಷೇತ್ರದಲ್ಲಿ ಜನ ಸೇವೆ ಮಾಡಲು ಆರಂಭಿಸಿ 1 ವರ್ಷ ಕಳೆದಿದೆ. ಹೊಸ ಸಂಸದರು ಚುನಾಯಿತರಾಗಿದ್ದಾರೆ. 2018 ವಿಧಾನಸಭೆ ಚುನಾವಣೆ ಬಳಿಕ ಎರಡ್ಮೂರು ಬಾರಿ ಸಾಮಾನ್ಯ ಸಭೆಗಳಾಗಿವೆ. ಆದರೂ ಶಾಸಕರು, ಸಂಸದರು, ಸದಸ್ಯ ಅವರ ಹೆಸರನ್ನು ಬೋರ್ಡ್‌ನಲ್ಲಿ ಬರೆಸಿಲ್ಲ. ಇದು ನಗರಸಭೆ ಅಧಿಕಾರಿಗಳ ಬೇಜಾವಾಬ್ದಾರಿ ಕೆಲಸವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನಹರಿಸಬೇಕು.ನಾರಾಯಣ್, 2ನೇ ವಾರ್ಡ್ ನಿವಾಸಿ, ಆನಂದ ಜ್ಯೋತಿ ಕಾಲನಿ ನಿವಾಸಿ, ಕೊಳ್ಳೇಗಾಲ
ನಗರಸಭೆ ವ್ಯಾಪ್ತಿಯ ವಾರ್ಡ್‌ಗಳ ನಾಮಫಲಕದಲ್ಲಿ ಮಾಹಿತಿ ಬರೆಸಲು ಈಗಾಗಲೇ ನಗರಸಭೆ ಅಧ್ಯಕ್ಷರು ಸೂಚನೆ ನೀಡಿದ್ದಾರೆ. ಎರಡು ದಿನಗಳ ಒಳಗೆ ಕೆಲಸ ಆರಂಭವಾಗಲಿದೆ.ಎ.ರಮೇಶ್, ಆಯುಕ್ತ, ಕೊಳ್ಳೇಗಾಲ ನಗರಸಭೆ
ನಾಮಫಲಕಗಳು ಕೆಲವೆಡೆ ಕಳವು ಆಗಿವೆ, ಮುರಿದು ಬಿದ್ದಿವೆ. ಕಳೆದ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ನೀತಿ ಸಂಹಿತೆಯಿಂದ ಬೋರ್ಡ್‌ಗೆ ಬಣ ಬಳಿಸಲಾಗಿತ್ತು. ನಂತರ 1 ವರ್ಷವಾದರೂ ನಗರಸಭೆ ಅಧಿಕಾರಿಗಳು ನೂತನ ಶಾಸಕರು, ಸಂಸದರು ಹೆಸರನ್ನು ಬರೆಸಿರಲಿಲ್ಲ. ಈ ಬಗ್ಗೆ ನಗರಸಭೆ ಅಧ್ಯಕ್ಷರ ಗಮನಕ್ಕೆ ತರಲಾಗಿದೆ. ಕ್ರಮವಹಿಸುವ ಬಗ್ಗೆ ತಿಳಿಸಿದ್ದಾರೆ.ರಾಘವೇಂದ್ರ, 15ನೇ ವಾರ್ಡ್ ಸದಸ್ಯ, ಕೊಳ್ಳೇಗಾಲ ನಗರಸಭೆ
ಈಗಾಗಲೇ ನಾಮಫಲಕ ಮಾಹಿತಿ ಬರೆಸಲು ತಿಳಿಸಿದ್ದೇನೆ. ಬಣ್ಣದ ಬರಹ ಬದಲಿಗೆ ಬೋರ್ಡ್‌ಗಳಿಗೆ ಸ್ಟಿಕ್ಕರ್ ಬರಹಗಳನ್ನು ಅಂಟಿಸಲಾಗುತ್ತಿದೆ. ಅ.18ರಂದು ನಡೆಯುವ ನಗರಸಭೆ ಸಾಮಾನ್ಯ ಸಭೆಯೊಳಗೆ ಈ ಕೆಲಸವಾಗಲಿದೆ.ಸಿ.ಎನ್.ರೇಖಾ ರಮೇಶ್, ನಗರಸಭೆ ಅಧ್ಯಕ್ಷೆ, ಕೊಳ್ಳೇಗಾಲ