ಕೊಳ್ಳೇಗಾಲ: ಸರ್ಕಾರಿ ಶಾಲೆ ಉಳಿಸುವುದರ ಜತೆಗೆ, ಅಭಿವೃದ್ಧಿಪಡಿಸಲು ನಿರಂತರವಾಗಿ ಶ್ರಮಿಸುತ್ತಿರುವುದು ಒಂದೆಡೆಯಾದರೆ, 3 ವರ್ಷದಲ್ಲಿ ಮಕ್ಕಳ ದಾಖಲಾತಿ ಕ್ಷೀಣಿಸುತ್ತಿರುವ ಕಾರಣಕ್ಕೆ 3 ಶಾಲೆಗಳು ಮುಚ್ಚಿಹೋಗಿ, 1 ಶಾಲೆ ವಿಲೀನವಾಗಿರುವುದು ಮತ್ತೊಂದೆಡೆ. ಇವೆಲ್ಲದರ ನಡುವೆ, 2023-23ನೇ ಸಾಲಿನಲ್ಲಿ ನಡೆಸಿದ ಸರ್ವೇಯಲ್ಲಿ 195 ಮಕ್ಕಳು ಶಾಲೆ ಬಿಟ್ಟಿರುವುದು ಬೆಳಕಿಗೆ ಬಂದಿದೆ.
ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪುತ್ತಿರುವುದು ಆತಂಕಕಾರಿ ಬೆಳೆವಣಿಗೆಯಾಗಿದೆ. 2022ರಲ್ಲಿ ಸಿದ್ದಯ್ಯನಪುರ ಗ್ರಾಮದ ಅನುದಾನಿತ ಮಿಷನ್ ಶಾಲೆ, ಮುಳ್ಳೂರು ಗ್ರಾಮದ ಮಿಷನ್ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲೆ ಮುಚ್ಚಿ ಹೋಗಿವೆ. ಅಂತೆಯೆ, ಇತ್ತೀಚೆಗೆ ಲಕ್ಕರಸನಪಾಳ್ಯ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯೂ ಮಕ್ಕಳಿಲ್ಲದೆ ಸ್ಥಗಿತಗೊಂಡಿದ್ದು, ಕೆಂಪನಪಾಳ್ಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಜತೆ ವಿಲೀನಗೊಳಿಸಲಾಗಿದೆ.
ಲಕ್ಕರಸನಪಾಳ್ಯದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2022-23ನೇ ಸಾಲಿನಲ್ಲಿ 1ರಿಂದ5 ನೇ ತರಗತಿವರೆಗೆ ಒಟ್ಟು 16 ಮಕ್ಕಳು ಓದುತ್ತಿದ್ದರು. ಪ್ರಸಕ್ತ ಸಾಲಿನಲ್ಲಿ 5ನೇ ತರಗತಿ ಓದುತ್ತಿದ್ದ 4 ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಶಾಲೆಯಿಂದ ಹೊರಬಂದಿದ್ದು, ಉಳಿದ 12 ವಿದ್ಯಾರ್ಥಿಗಳು ಟಿಸಿ ಪಡೆದು ಬೇರೆ ಶಾಲೆಗಳಿಗೆ ಸೇರಿಕೊಂಡಿರುವುದರಿಂದ ಶಾಲೆಗೆ ಬೀಗ ಹಾಕಲಾಯಿತು. ಅಲ್ಲದೆ, ಇಲ್ಲಿದ್ದ ಇಬ್ಬರು ಶಿಕ್ಷಕರನ್ನು ಬೇರೆ ಶಾಲೆಗೆ ನಿಯೋಜಿಸಲಾಯಿತು.
2022-2023ನೇ ಸಾಲಿನಲ್ಲಿ ಸಿಆರ್‌ಪಿ ಹಾಗೂ ಬಿಆರ್‌ಪಿ ಮಾಡಿದ ಶಾಲೆ ಬಿಟ್ಟ ಮಕ್ಕಳ(ಒಒಎಸ್‌ಸಿ) ಸರ್ವೇಯಲ್ಲಿ 6 ರಿಂದ 14 ವರ್ಷದೊಳಗಿನ ಸರ್ಕಾರಿ, ಅನುದಾನಿತ, ಅನುದಾನ ರಹಿತ ಹಾಗೂ ಬುಡಕಟ್ಟು ಶಾಲೆಯ 70 ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಂತೆಯೆ, 15 ರಿಂದ 19 ವರ್ಷದೊಳಗಿನ ಸರ್ಕಾರಿ, ಅನುದಾನಿತ, ಅನುದಾನ ರಹಿತ, ರೆಸಿಡೆನ್ಸಿ ಹಾಗೂ ಬುಡಕಟ್ಟು ಶಾಲೆಯ ಒಟ್ಟು 125 ವಿದ್ಯಾರ್ಥಿಗಳು ಶಾಲೆ ಬಿಟ್ಟಿದ್ದಾರೆ. ಆ ಮೂಲಕ ಒಟ್ಟು 195 ವಿದ್ಯಾರ್ಥಿಗಳು ಶಾಲೆ ತ್ಯಜಿಸಿದ್ದು, ಇವರಲ್ಲಿ 134 ಗಂಡು, 61 ಹೆಣ್ಣು ಮಕ್ಕಳಿದ್ದಾರೆ.
ಆಂಗ್ಲ ಮಾಧ್ಯಮಕ್ಕೆ ಮೊರೆ
ಇತ್ತೀಚೆಗೆ ಪಾಲಕರು ಆಂಗ್ಲಮಾಧ್ಯಮ ಹಾಗೂ ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದಾರೆ. ಅದರಂತೆ, ಲಕ್ಕರಸನಪಾಳ್ಯ ಶಾಲೆಯಲ್ಲಿ ಟಿಸಿ ಪಡೆದ 12 ವಿದ್ಯಾರ್ಥಿಗಳು ಪೈಕಿ ನಾಲ್ವರು ಕೆಂಪನಪಾಳ್ಯದ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆೆ, ಇನ್ನು 4 ವಿದ್ಯಾರ್ಥಿಗಳು ಕೊಳ್ಳೇಗಾಲದ ಖಾಸಗಿ ಶಾಲೆಗೆ ಸೇರಿದ್ದರೆ, ಉಳಿದ ನಾಲ್ವರು ಬೆಂಗಳೂರು, ಮಳವಳ್ಳಿ ಶಾಲೆಗೆ ಸೇರಿಕೊಂಡಿದ್ದಾರೆ. ಪಾಲಕರು ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸುವುದಾಗಿ ತಿಳಿಸಿ ಶಿಕ್ಷಕರಿಂದ ಟಿಸಿ ಪಡೆದಿದ್ದಾರೆ ಎಂದು ಬಿಇಒ ಮಂಜುಳಾ ಮಾಹಿತಿ ನೀಡಿದರು.
ಮನೆ ಮನೆಗೆ ಭೇಟಿ: ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಈಗಾಗಲೇ ಕಾರ್ಯಕ್ರಮ ನಡೆಸುತ್ತಿದೆ. ಪ್ರತಿ ವಿದ್ಯಾರ್ಥಿ ಮನೆಗೆ ತೆರಳಿ ಓದುವಂತೆ ತಿಳಿಹೇಳುತ್ತಿದೆ. ಸದ್ಯ ಇಬ್ಬರು ಮಕ್ಕಳ ಮನಪರಿವರ್ತಿಸಿ ಮತ್ತೆ ಶಾಲೆಗೆ ಸೇರಿಕೊಳ್ಳಲಾಗಿದೆ.
ಗ್ರಾಮದಲ್ಲಿ ಸಭೆ
ಲಕ್ಕರಸನಪಾಳ್ಯದಲ್ಲಿನ ಸರ್ಕಾರಿ ಶಾಲೆಯನ್ನು ಪ್ರಾರಂಭಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದು, ಶುಕ್ರವಾರ ಗ್ರಾಮದಲ್ಲಿ ಸಭೆ ನಡೆಸಿ ಊರಿನ ಮುಖಂಡರು ಹಾಗೂ ಗ್ರಾ.ಪಂ ಸದಸ್ಯರ ಜತೆ ಚರ್ಚಿಸಲಿದ್ದಾರೆ.
ಶಾಲೆ ಬಿಟ್ಟ ಮಕ್ಕನ್ನು ಮತ್ತೆ ಶಾಲೆಗೆ ಸೇರಿಸಿಕೊಳ್ಳಲು ಮನೆ-ಮನೆಗೆ ಭೇಟಿ ನೀಡಲಾಗುತ್ತಿದೆ. ಮಕ್ಕಳ ದಾಖಲಾತಿ ಇಲ್ಲದೆ ಸ್ಥಗಿತಗೊಂಡಿರುವ ಲಕ್ಕರಸನಪಾಳ್ಯ ಗ್ರಾಮದಲ್ಲಿನ ಶಾಲೆ ಆರಂಭಕ್ಕೆ ಕ್ರಮವಹಿಸಲಾಗಿದೆ. ಊರಿನ ಮುಖಂಡರು ಹಾಗೂ ಗ್ರಾ.ಪಂ. ಸದದ್ಯರ ಜತೆ ಸಭೆ ನಡೆಸಿ ಮನವರಿಕೆ ಮಾಡಲಾಗುತ್ತದೆ.-ಮಂಜುಳಾ, ಬಿಇಒ