ಕೊಳ್ಳೇಗಾಲ : ಬದುಕಿನಲ್ಲಿ ಬಂದ ಕಷ್ಟಗಳಿಗೆ ಕೃಷಿಯೇ ಪರಿಹಾರವೆಂದು ಭಾವಿಸಿರುವ ರೈತರೊಬ್ಬರು ಉತ್ತಮ ಫಸಲು ಹಾಗೂ ಆದಾಯವನ್ನು ಪಡೆಯುತ್ತಿದ್ದಾರೆ.
ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿ ಗ್ರಾಮದ ಲೇ.ಮಂಟಯ್ಯ ಮತ್ತು ಪುಟ್ಟನಂಜಮ್ಮ ದಂಪತಿ ಮಗ ಶಿವಕುಮಾರ್ ಮಾದರಿ ರೈತ. ಇವರು ಸುಮಾರು 15 ವರ್ಷಗಳ ಹಿಂದೆ 5 ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಬದುಕು ಕಟ್ಟಿಕೊಳ್ಳುತ್ತೇವೆ ಎಂದು ಬಂದವರು ಇಂದು ಯಶಸ್ಸಿನ ಬದುಕು ಕಟ್ಟಿಕೊಂಡಿದ್ದಾರೆ.
ತಮ್ಮ ಜಮೀನಿನಲ್ಲಿ ತೆಂಗು, ಜೋಳ, ಅರಿಶಿಣ, ಹೆಬ್ಬೇವು, ತೇಗ ಮತ್ತು ಇನ್ನಿತರೆ ಮರಗಳನ್ನು ಬೆಳೆಸಿದ್ದಾರೆ. ಅದಲ್ಲದೇ ಹಲವಾರು ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಕೃಷಿಯಿಂದ ನೀವು ಏನು ಸಾಧನೆ ಮಾಡಲು ಸಾಧ್ಯ ಎಂದು ಆಡಿಕೊಂಡವರ ಮುಂದೆ ಕೃಷಿ ಹಾಗೂ ಹೈನುಗಾರಿಕೆಯಲ್ಲಿ ಸಾಧನೆ ಮಾಡಿ ತೋರಿಸಿದ್ದಾರೆ.
ಈ ಮೊದಲು ಜಮೀನಿನಲ್ಲಿ ಕಬ್ಬು ಹಾಕುವ ಪ್ರಯತ್ನ ಮಾಡಿದ್ದರೂ, ಯಾವುದೇ ಲಾಭ ಕಾಣದೇ ಹೈನುಗಾರಿಕೆಯನ್ನು ಪ್ರಧಾನವಾಗಿಸಿಕೊಂಡರು. ಜಮೀನಿನಲ್ಲೇ ಸ್ವಂತ ಮನೆ ಕಟ್ಟಿಕೊಂಡು ಕೋಳಿ ಸಾಕಾಣಿಕೆಗೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಸುಮಾರು 1000 ಕ್ಕಿಂತಲೂ ಹೆಚ್ಚು ನಾಟಿ ಕೋಳಿಯನ್ನು ಸಾಕುತ್ತಿದ್ದಾರೆ. ಜತೆಗೆ 5 ಹಸುಗಳನ್ನು ಸಾಕುತ್ತಿದ್ದು, ಹಾಲಿನಿಂದಲೂ ಆದಾಯ ಮಾಡುತ್ತಿದ್ದಾರೆ. 20-25 ಆಡು ಮತ್ತು ಕುರಿಗಳನ್ನು ಸಾಕಾಣಿಕೆ ಮಾಡುತ್ತಿದ್ದಾರೆ. ಜೋಳವನ್ನು ಪ್ರಧಾನ ಆದಾಯದ ಬೆಳೆಯನ್ನಾಗಿ ಮಾಡಿಕೊಂಡಿರುವ ರೈತ ಶಿವಕುಮಾರ್ ಅವರು, ವರ್ಷದಲ್ಲಿ 2 ಬಾರಿ ಅದರಿಂದಲೇ ಸಾಕಷ್ಟು ಲಾಭವನ್ನು ಗಳಿಸುತ್ತಿದ್ದಾರೆ. 5 ಎಕರೆ ಜಮೀನಿನ ಸುತ್ತಲೂ ಸೂಕ್ತವಾಗಿ ಸೋಲಾರ್ ಬೇಲಿಯನ್ನು ಅಳವಡಿಸಿಕೊಂಡಿದ್ದು, ಕಾಡು ಪ್ರಾಣಿಗಳ ಹಾವಳಿ ಹಾಗೂ ಇನ್ನಿತರೆ ಸಮಸ್ಯೆಗಳಿಂದ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ. ಒಟ್ಟಾರೆಯಾಗಿ ಕೃಷಿ ಮತ್ತು ಹೈನುಗಾರಿಕೆಯಿಂದ ವರ್ಷದಲ್ಲಿ ಖರ್ಚನ್ನು ಕಳೆದು 8-10 ಲಕ್ಷ ರೂ. ಆದಾಯವನ್ನು ಮಾಡುತ್ತಿದ್ದಾರೆ.
ಕೋಳಿ ಸಾಕಾಣಿಕೆ:
ರೈತ ಶಿವಕುಮಾರ್ ಅವರು ಸುಮಾರು 2ಲಕ್ಷ ರೂ, ವರೆಗೆ ಖರ್ಚುಮಾಡಿ 1000 ನಾಟಿ ಕೋಳಿಯನ್ನು ಸಾಕಾಣೆ ಮಾಡುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. 2-3 ತಿಂಗಳವರೆಗೆ ಅವುಗಳಿಗೆ ಆಹಾರ ಕೊಟ್ಟು ಉತ್ತಮ ರೀತಿಯಲ್ಲಿ ಸಾಕುತ್ತಾರೆ. ಈಗಾಗಲೇ ಸಾಕಷ್ಟು ಕೋಳಿಗಳನ್ನು ಮಾರಾಟ ಮಾಡಿದ್ದು, ಕೇವಲ 3 ತಿಂಗಳಲ್ಲೇ 60-70 ಸಾವಿರ ರೂ. ಉಳಿತಾಯ ಮಾಡುತ್ತಾರೆ. ಅದಲ್ಲದೇ 5 ಹಸುಗಳ ಸಾಕಾಣಿಕೆ ಮಾಡುತ್ತಿದ್ದಾರೆ. ಸದ್ಯಕ್ಕೆ ಮೂರು ಹಸುಗಳಿಂದ 5-10 ಲೀಟರ್ ಹಾಲನ್ನು ಮಾರಾಟ ಮಾಡುತ್ತಿದ್ದಾರೆ. ಇದರಿಂದಲೇ ತಿಂಗಳಿಗೆ 5000 ರೂ, ಆದಾಯ ಮಾಡುತ್ತಿದ್ದಾರೆ. ಈ ಮೊದಲು ಕೃಷಿ ಹೊಂಡವನ್ನು ಮಾಡಿದ್ದು, ಸುಮಾರು ಮೀನುಗಳ ಸಾಕಾಣಿಕೆಗೂ ಮುಂದಾಗಿದ್ದರು. 20-25 ಕುರಿ ಮತ್ತು ಮೇಕೆಗಳನ್ನು ಸಾಕಾಣಿಕೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಅದರ ಸಂಖ್ಯೆಯನ್ನು 100-150 ಕ್ಕೆ ಹೆಚ್ಚಿಸುವ ಯೋಜನೆಯನ್ನು ಹಾಕಿಕೊಂಡಿದ್ದಾರೆ.
ಜೋಳದಲ್ಲೇ ಆದಾಯ:
ರೈತ ಶಿವಕುಮಾರ್ ಅವರು ತಮ್ಮದು ಎನ್ನುವ 5 ಎಕರೆ ಜಮೀನಿನಲ್ಲಿ ಸುಮಾರು 3-4 ಎಕರೆಯನ್ನು ಪ್ರಧಾನವಾಗಿ ಜೋಳವನ್ನು ಬೆಳೆಯಲು ಮೀಸಲು ಇಟ್ಟುಕೊಂಡಿದ್ದಾರೆ. ಜೋಳದಿಂದಲೇ ನಾಲ್ಕು ತಿಂಗಳಿಗೆ 2-3 ಲಕ್ಷ ರೂ, ವರೆಗೆ ಆದಾಯ ಮಾಡುತ್ತಿದ್ದಾರೆ. ಅದರಲ್ಲೂ ವರ್ಷದಲ್ಲಿ 2 ಬೆಳೆಯನ್ನು ಬೆಳೆಯುತ್ತಿದ್ದಾರೆ. ಜೋಳಕ್ಕೆ ಹನಿ ನೀರಾವರಿ ವ್ಯವಸ್ಥೆಯನ್ನು ಮಾಡಿದ್ದು, ಒಂದು ಬಾರಿಯಷ್ಟೇ ಕಳೆಯನ್ನು ತೆಗೆಯುತ್ತಾರೆ. ಸ್ವಂತ ಟ್ರ್ಯಾಕ್ಟರ್ ಉಳುಮೆ, ಬಿತ್ತನೆ ಹಾಗೂ ಆಡು, ಕುರಿ ಮತ್ತು ಹಸುಗಳ ಗೊಬ್ಬರ ಬಳಕೆಯಿಂದ ಉತ್ಕೃಷ್ಟವಾದ ಜೋಳವನ್ನು ಬೆಳೆಯುತ್ತಿದ್ದಾರೆ. ಪರಿಣಾಮವಾಗಿ ಬೇರೆ ಬೆಳೆಗಳಿಂದ ನಷ್ಟವಾದರೂ, ಅದರ ನಷ್ಟವನ್ನು ಇದರಿಂದ ಭರಿಸಿಕೊಳ್ಳುತ್ತಿದ್ದಾರೆ.
ಪತ್ನಿಯೇ ಬೆನ್ನೆಲುಬು:
ರೈತ ಶಿವಕುಮಾರ್ ಅವರು ಒಂದು ರೂಪಾಯಿಯ ಬಂಡವಾಳ ಇಲ್ಲದೇ ವ್ಯವಸಾಯ ಹಾಗೂ ಹೈನುಗಾರಿಕೆಯನ್ನು ಆರಂಭಿಸಿದರು.
ಈ ವೇಳೆ ಅವರ ಪತ್ನಿಯಾದ ಹೇಮಾವತಿ ಅವರು ಬೆನ್ನೆಲುಬಾಗಿ ನಿಂತುಕೊಂಡರು. ಇಂದಿಗೂ ಹಸು, ಆಡು, ಕುರಿ ಮತ್ತು ಕೋಳಿಗಳಿಗೆ ಆಹಾರ ಒದಗಿಸುವುದರಿಂದ ಹಿಡಿದು ಭೂಮಿಯ ಕಳೆಯನ್ನು ತೆಗೆಯುವುದರಲ್ಲೂ ಹೇಮಾವತಿ ಸಹಕಾರ ಮಾಡುತ್ತಿದ್ದಾರೆ. ಮುಂಜಾನೆಯಿಂದ ಸಂಜೆಯವರೆಗೂ ಜಮೀನಿನಲ್ಲಿ ಗಂಡನಿಗಿಂತಲೂ ಹೆಚ್ಚು ಬೆವರು ಹರಿಸುತ್ತಿದ್ದಾರೆ. ಈ ಕೃಷಿಕ ದಂಪತಿಗಳಿಗೆ ಮನೋಜ್ ಕುಮಾರ್, ಮಣಿಕಂಠ ಹಾಗೂ ನಿಖಿಲ್ ಎಂಬ ಮೂವರು ಗಂಡು ಮಕ್ಕಳು ಇದ್ದು, ಪಾಲಕರ ಕೃಷಿ ಬದುಕಿಗೇ ತಮ್ಮದೇಯಾದ ಸಹಕಾರವನ್ನು ನೀಡುತ್ತಿದ್ದಾರೆ.
ನಾವು ಯಾವುದೇ ಬಂಡವಾಳ ಇಲ್ಲದೇ ಕೃಷಿ ಮಾಡಲು ಬಂದವರು. ತುಂಬಾ ಶ್ರಮಪಟ್ಟು, ತಾಳ್ಮೆಯಿಂದ ವ್ಯವಸಾಯ ಮಾಡಿದರೇ ಸಾಕಷ್ಟು ಲಾಭವನ್ನು ಗಳಿಸಬಹುದಾಗಿದೆ. ಉತ್ತಮವಾದ ಬದುಕು ಕೃಷಿಯಿಂದ ಸಾಧ್ಯವಾಗುತ್ತದೆ.ಶಿವಕುಮಾರ್, ರೈತ, ಕುಣಗಳ್ಳಿ, ಕೊಳ್ಳೇಗಾಲ