ಜಿಲ್ಲೆ

ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೃಷ್ಣಮೂರ್ತಿ ಚಾಲನೆ

ಕೊಳ್ಳೇಗಾಲ: ತಾಲೂಕಿನ ತಿಮ್ಮರಾಜೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 1.36 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಶಾಸಕ ಎ.ಆರ್.ಕೃಷ್ಣಮೂರ್ತಿ ಚಾಲನೆ ನೀಡಿದರು.

ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಸಣ್ಣ ನೀರಾವರಿ ಇಲಾಖೆ ಮೂಲಕ 1.10 ಕೋಟಿ ರೂ. ವೆಚ್ಚದಲ್ಲಿ ಅರೇಪಾಳ್ಯ ಹೆಬ್ಬಾಳ ಕಟ್ಟೆಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಎರಕಟ್ಟೆಯಲ್ಲಿ ನರೇಗಾ ಯೋಜನೆಯಡಿ 20 ಲಕ್ಷ ರೂ. ವೆಚ್ಚದಲ್ಲಿ ಅಂಗನವಾಡಿ ಕೇಂದ್ರ ನಿರ್ಮಾಣ, 6 ಲಕ್ಷ ರೂ. ವೆಚ್ಚದಲ್ಲಿ ಅಪೂರ್ಣವಾಗಿರುವ ಗಿರಿಜನ ಸಮುದಾಯದ ಭವನ ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಕಾಮಗಾರಿ ನಿರ್ವಹಣೆ ಹೊತ್ತವರು ಗುಣಮಟ್ಟದ ಕಾಮಗಾರಿ ನಿರ್ವಹಿಸಬೇಕು. ಜತೆಗೆ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ತಿಮ್ಮರಾಜೀಪುರ ಗ್ರಾಪಂ ಅಧ್ಯಕ್ಷ ರಶ್ಮಿರಾಜು, ಉಪಾಧ್ಯಕ್ಷೆ ಸಹನಾ ಪ್ರೀಯ, ಸದಸ್ಯ ಲಕ್ಷೀ ಶಿವಣ್ಣ, ಪಾಸ್ಕಲ್ ಮೇರಿ, ಕೆಂಪರಾಜು, ದಿಲೀಪ್ ಕುಮಾರ್, ಮುಳ್ಳೂರು ಮಂಜು, ಸಣ್ಣ ನೀರಾವರಿ ಇಲಾಖೆ ಎಇಇ ಅಭಿಲಾಷ್, ನಿರ್ಮಿತಿ ಕೇಂದ್ರ ಪ್ರತಾಪ್, ಕಬಿನಿ ರಮೇಶ್ ಇದ್ದರು.