ಕೊಳ್ಳೇಗಾಲ: ಪಟ್ಟಣದ ಲಯನ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಅಖಿಲ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಶರಣರ ವಿಚಾರಧಾರೆಗಳ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಾಹಿತಿ ಶಿವಣ್ಣ ಇಂದ್ವಾಡಿ ಮಾತನಾಡಿ, ಬಸವಣ್ಣ ಅವರು ಕಾಯಕ ದಾಸೋಹ ಸತ್ಸಂಗದೊಂದಿಗೆ ಮಾನವೀಯತೆಯನ್ನೇ ಮುಂಚೂಣಿಗೆ ತಂದ ಅನುಭವಿಗಳು, ಹೃದಯ ಸಿರಿವಂತರು, ಸಾಮಾಜಿಕ ಬದುಕಿನಲ್ಲಿ ಯಾವುದೇ ಸ್ಥಾನಮಾನ ಹೊಂದದವರನ್ನು ಸಮಾಜದ ನೆಲೆಯೊಳಗೆ ಗುರುತಿಸಿಕೊಳ್ಳಲು ಸಹಕಾರಿಯಾಗಿದ್ದಾರೆ ಎಂದರು.
ಯಾರು ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡು ಹೇಳಿದ್ದನ್ನೆಲ್ಲ ಮಾಡುವ, ಕೇಳಿದ್ದನ್ನೆಲ್ಲ ಕೊಡುವ ನಿರ್ಬಂಧದೊಳಗೆ ಬದುಕುತ್ತಿದ್ದವರನ್ನೆಲ್ಲ ಸಂಘಟಿಸಿ, ಸರ್ವ ಸ್ವಾತಂತ್ರೃ, ಸ್ವಾವಲಂಬಿ, ಸ್ವಾಭಿಮಾನ ಮಾನವೀಯ ಮೌಲ್ಯಗಳನ್ನು ಅನುಷ್ಠಾನಗೊಳಿಸಿದ ಮಹಾ ಧೀಮಂತರು ಎಂದು ಹೇಳಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ನಾಗರಾಜು ಕೊಂಗರಹಳ್ಳಿ ಮಾತನಾಡಿದರು. ಪ್ರಾಂಶುಪಾಲೆ ವಿನುತಾ, ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಶಿವಕುಮಾರ್, ಶಿಕ್ಷಕರು ವಿದ್ಯಾರ್ಥಿಗಳು ಇದ್ದರು.