ಕೊಳ್ಳೇಗಾಲ: ತಮ್ಮ ತೋಟದಲ್ಲಿ ಸಹಜ ಕೃಷಿ ಪದ್ಧತಿ ಅಳವಡಿಸಿಕೊಂಡು ವಿವಿಧ ರೀತಿಯ ಹಣ್ಣಿನ ಗಿಡಗಳನ್ನು ಬೆಳೆಯುವ ಮೂಲಕ ಇಲ್ಲೊಬ್ಬ ರೈತರು ಯಶಸ್ಸು ಕಂಡಿದ್ದು, ನೆಮ್ಮದಿಯ ಜೀವನ ಕಟ್ಟಿಕೊಂಡಿದ್ದಾರೆ.
ತಾಲೂಕಿನ ಸಿದ್ದಯ್ಯನಪುರ ಗ್ರಾಮದ ಎನ್.ಶಶಿಶೇಖರ್ ಮೈಸೂರಿನ ಮಾನಸಗಂಗೋತ್ರಿಯಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಬೆಂಗಳೂರಿನ ದಿ ಆಕ್ಸ್‌ವರ್ಡ್ ಆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮುಖ್ಯ ಗ್ರಂಥಪಾಲಕರಾಗಿ 15 ವರ್ಷಗಳ ಸೇವೆ ಸಲ್ಲಿಸಿದ್ದು, ಕೈ ತುಂಬ ಸಂಬಳ ಸಿಗುತ್ತಿತ್ತು. ಹಣಕ್ಕೇನು ತೊಂದರೆ ಇರಲಿಲ್ಲ. ಆದರೆ, ಆರೋಗ್ಯ ಸಮಸ್ಯೆ ಕಾಡಲಾರಂಭಿಸಿತು. ಇದರಿಂದ ಎಚ್ಚೆತ್ತು 5 ವರ್ಷಗಳ ಹಿಂದೆ ಕೆಲಸ ಬಿಟ್ಟು ಊರು ಸೇರಿದರು. ತಮಗಿದ್ದ ತೋಟ, ಜಮೀನಿನಲ್ಲಿ ಕೃಷಿ ಕಾಯಕ ಆರಂಭಿಸಿದರು. ಈಗ ಆರೋಗ್ಯವೂ ಚೇತರಿಕೆ ಕಂಡಿದೆ. ಲವಲವಿಕೆಯಿಂದ ತೋಟ ಹಾಗೂ ಜಮೀನು ಕೆಲಸಗಳನ್ನು ಮಾಡಿಕೊಂಡು ಆರೋಗ್ಯದ ಜೀವನ ನಡೆಸುತ್ತಿದ್ದಾರೆ. ಇರುವ 9 ಎಕರೆ ಜಮೀನಿನಲ್ಲಿ ಮೂರೂವರೆ ಎಕರೆಯಲ್ಲಿ ಭತ್ತ ಕೃಷಿ ಮಾಡುತ್ತಿದ್ದಾರೆ. 1 ಎಕರೆಯಲ್ಲಿ ತೋಟ ನಿರ್ಮಿಸಿದ್ದಾರೆ, ತೋಟದ ಸುತ್ತಲೂ 54 ತೆಂಗಿನ ಮರಗಳನ್ನು ಬೆಳೆದಿದ್ದಾರೆ. ವಿವಿಧ ಜಾತಿಯ ಹಲಸು ಬೆಳೆದಿದ್ದಾರೆ. ಕಾಲು ಎಕರೆಯಲ್ಲಿ ಸಹಜ ಕೃಷಿ ಪದ್ಧತಿಯಲ್ಲಿ ಹಲವು ಹಣ್ಣಿನ ಗಿಡಗಳನ್ನು ಬೆಳೆದು ಸೈ ಎನಿಸಿಕೊಂಡಿದ್ದಾರೆ.
ದನದ ಗೊಬ್ಬರ: ಕಳೆದ 5 ವರ್ಷಗಳಿಂದ ಸಂಪೂರ್ಣ ಸಾವಯವ ಕೃಷಿ ನಡೆಸುತ್ತಿದ್ದಾರೆ. ಪ್ರಗತಿಪರ ರೈತ ಸಾಧನೆ, ಕೃಷಿ ವಿಧಾನ, ಸಾವಯವ ಪದ್ಧತಿ, ಸಹಜ ಕೃಷಿ ಬಗೆಗಿನ ಪುಸ್ತಕಗಳನ್ನು ಓದುವ ಮೂಲಕ ವ್ಯವಸ್ಥಿತವಾದ ಸಹಜ ಕೃಷಿ ಆರಂಭಿಸಿದ್ದಾರೆ. ಜಮೀನಿನಲ್ಲಿ ಲಭ್ಯವಿರುವ ಕಳೆ, ತ್ಯಾಜ್ಯವನ್ನು ಮಲ್ಚಿಂಗ್ ಮಾಡುವುದು, ಸಗಣಿ, ಕೊಟ್ಟಿಗೆ ಗೊಬ್ಬರ, ಗೋಮೂತ್ರ ಖರೀದಿ ಮಾಡಿ ವ್ಯವಸಾಯಕ್ಕೆ ಬಳಸುತ್ತಿದ್ದಾರೆ. ತೋಟದಲ್ಲಿ ದೊರೆತ ತ್ಯಾಜ್ಯವನ್ನು ಶೇಖರಿಸಿ ಕೊಳೆಸಿದರೆ ಸಿಗುವ ಗೊಬ್ಬರವನ್ನೇ ಭೂಮಿಯ ಫಲವತ್ತತೆ ಬಳಸುತ್ತಿದ್ದಾರೆ.
ತೋಟದಲ್ಲೇನಿದೆ?: ಲಿಂಗಣಾಪುರ ಸಮೀಪಲ್ಲಿರುವ 1 ಎಕರೆಯ ತೋಟದ ಕಾಲು ಎಕರೆ ಭೂಮಿಯಲ್ಲಿ ಥೈಲ್ಯಾಂಡ್ ಹಲಸು, ಕೆಂಪು ಸೀತಾಫಲ, ಲಕ್ಷ್ಮಣ ಫಲ, ಸೀಬೆ, ಸೀಡ್‌ಲೆಸ್ ನಿಂಬೆ, ನಿಂಬೆ, ದಾಳಿಂಬೆ, ನೆರಳೆ, ಅಡಕೆ, ಕಾಫಿ, ಮೆಣಸು, ಕರಿಬೇವು, ಜಾಯಿಪತ್ರೆ, ವಾಟರ್ ಆ್ಯಪಲ್, ಮಲೇಶಿಯಾ ಆ್ಯಪಲ್, ಪರಂಗಿ, ಬಟರ್ ಫ್ರೂಟ್, ಅಂಜುರ, ಚೆರಿ, ಸ್ಟಾರ್ ಫ್ರೂಟ್, ಬಿರಿಯಾನಿ ಎಲೆ, ಹಿಪ್ಪುನೇರಳೆ, ನುಗ್ಗೆಕಾಯಿ, ಬೆಣ್ಣೆಹಣ್ಣು, ಗೇರುಹಣ್ಣು, ಮಾವು, ಬಾಳೆ, ನೆದರ್‌ಲೆಂಡ್ ಹಲಸು, ನೆಲ್ಲಿ, ಕಾಡು ನೆಲ್ಲಿಕಾಯಿ, ಸಿಲ್ವರ್ ಮರ, ತೇಗದಮರ ಬೆಳೆದಿದ್ದಾರೆ.
ಜೇನು ಸಾಕಣೆ:
ತೋಟದಲ್ಲಿ ಕಿರು ಜೇನು ಸಾಕಣೆ ಮಾಡಲಾಗುತ್ತಿದೆ. ಜೇನುನೊಣಗಳ ಪರಾಗ ಸ್ಪರ್ಶದಿಂದ ಸುತ್ತಲಿರುವ ಹಣ್ಣಿನ ಗಿಡಗಳು ಸಮೃದ್ಧಿಯಾಗಿ ಬೆಳೆಯುತ್ತಿದೆ. ತೋಟದಲ್ಲಿ ಹಕ್ಕಿಗಳ ಕಲರವ: ಸಹಜ ಕೃಷಿ ಜತೆಗೆ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಲಾಗಿದೆ. ತೋಟಕ್ಕೆ ಭೇಟಿ ನೀಡುವ ಹಕ್ಕಿ-ಪಕ್ಷಿಗಳಿಗೆ ಕುಡಿಯಲು ನೀರಿನ ವ್ಯವಸ್ಥೆ ಮಾಡಲಾಗಿದೆ. ಪಿಕಳಾರ, ನವಿಲು, ಮೈನಾ, ಕೋಗಿಲೆ, ಪಾರಿವಾಳ ಸೇರಿದಂತೆ ಹಲವು ಪ್ರಭೇದದ ಕಾಡಿನ ಹಕ್ಕಿಗಳು ನಿತ್ಯವೂ ತೋಟಕ್ಕೆ ಭೇಟಿ ನೀಡಲಿದೆ.
ಸುಖದ ಜೀವನಕ್ಕಿಂತ ನೆಮ್ಮದಿ ಜೀವನ ಲೇಸು: ಒಳ್ಳೆಯ ಕೆಲಸ, ಕೈ ತುಂಬ ಸಂಬಳವಿತ್ತು. ಫೋನ್, ಇಂಟರ್‌ನೆಟ್, ಸಿಗ್ನೆಚರ್ ಜೀವನವಾಗಿತ್ತು. ದಿನದ ಮೂರು ಹೊತ್ತು ಲಕ್ಸುರಿ ಹೋಟೆಲ್‌ಗಳಲ್ಲಿ ಊಟೋಚಾರ ನಡೆಯುತ್ತಿತ್ತು. ಸುಖದ ಜೀವನ ಇವರನ್ನು ಆವರಿಸುತ್ತಿದಂತೆ ಅನಾರೋಗ್ಯ ಕಾಡಲಾರಂಭಿಸಿತು. ದೇಹದಲ್ಲಿ ಹಲವು ಸಮಸ್ಯೆಗಳು ಉಲ್ಭಣವಾದವು. ನಂತರ ದೃಢ ನಿರ್ಧಾರ ಕೈಗೊಂಡು ಕೆಲಸ ಬಿಟ್ಟು ಗ್ರಾಮದಲ್ಲಿ ವ್ಯವಸಾಯ ಆರಂಭಿಸಿದರು. ಈಗ ಆರೋಗ್ಯ ಜತೆಗೆ ನೆಮ್ಮದಿ ಜೀವನವನ್ನು ಕೃಷಿ ನೀಡಿದೆ.
ಕ್ರೀಯಾಶೀಲ ಕೃಷಿ:
ಕೃಷಿಯಲ್ಲಿ ಕ್ರಿಯಾಶೀಲತೆ ಬೆಳೆಸಿಕೊಂಡಿರುವ ಇವರು, ತಂತ್ರಜ್ಞಾನದ ಸಹಾಯದಿಂದ ಯಶಸ್ವಿ ಕೃಷಿ ಕೈಗೊಂಡಿದ್ದಾರೆ. 60ಕ್ಕೂ ಹೆಚ್ಚು ಸಲಕರಣೆಗಳನ್ನು ಒಂದೇ ಸೂರಿನಲ್ಲಿ ಇಡುವ ಸ್ಟಾೃಂಡ್ ನಿರ್ಮಿಸಿಕೊಂಡಿದ್ದಾರೆ. ಡಿಗರ್, ಸ್ಪ್ರೈಯರ್, ಕಳೆ ತೆಗೆಯುವ ಯಂತ್ರ (ವಿಡರ್) ಸೇರಿದಂತೆ ಕೃಷಿಗೆ ಅಗತ್ಯವಿರುವ ಸಲಕರಣೆಗಳನ್ನು ಇಟ್ಟುಕೊಂಡಿದ್ದಾರೆ. ಅಲ್ಲದೆ, ಕೃಷಿ ಜತೆಗೆ ಕವಿತೆಗಳ ಮೇಲು ಆಸಕ್ತಿ ವಹಿಸಿಕೊಂಡಿದ್ದಾರೆ. ಅವರು ರಚಿಸಿದ ಕವಿತೆಗಳು ಮುನ್ನುಡಿ, ಸಿರಿ, ಅನನ್ಯ ಸಂಚಿಕೆಗಳಲ್ಲಿ ಪ್ರಕಟವಾಗಿವೆ.
ಮೀನುಗಾರಿಕೆ, ಕುರಿ ಸಾಕಣೆ ಆಲೋಚನೆ: ಸಹಜ ಕೃಷಿಯೊಂದಿಗೆ ಮೀನುಗಾರಿಕೆ, ಕುರಿ ಸಾಕಣೆ ಮಾಡುವ ಉದ್ದೇಶ ಹೊಂದಿದ್ದು. ಕಡಿಮೆ ಅವಧಿಯಲ್ಲಿ ಮಾದರಿ ರೈತನಾಗಿ ಹೊರಹೊಮ್ಮಿದ್ದಾರೆ.
ಸಹಜ ಕೃಷಿ ಭೂಮಿಗೆ ಅಗತ್ಯವಿದೆ. ಇದು ಭೂಮಿಯ ಉಳಿಸುವ ಕಾರ್ಯಕ್ಕೆ ಸಹಕಾರಿ, ಹಿತಕರ ಬೆಳೆ ಉತ್ಪಾದನೆಯೂ ಸಾಧ್ಯ. ಕೃಷಿ ಬದುಕು ನನಗೆ ಆರೋಗ್ಯ ಜತೆಗೆ, ನೆಮ್ಮದಿ ನೀಡಿದೆ. ಎನ್.ಶಶಿಶೇಖರ್, ಮಾದರಿ ರೈತ, ಸಿದ್ದಯ್ಯನಪುರ ಗ್ರಾಮ