ಜಿಲ್ಲೆ

ರಸ್ತೆಗಳ ಅಗಲೀಕರಣ ಆಗುವುದೇ?

ಕಿರಣ್ ಮಾದರಹಳ್ಳಿ

ಕೊಳ್ಳೇಗಾಲ: ಪಟ್ಟಣದ ಹೃದಯ ಭಾಗದಲ್ಲಿ ಹಾದು ಹೋಗಿರುವ ಡಾ.ರಾಜ್ ಕುಮಾರ್ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ಅಗಲೀಕರಣ ಯಾವಾಗ ಎಂಬ ಕೂಗು ಪದೇ ಪದೇ ಕೇಳಿ ಬರುತ್ತಿದೆ.

ಕಳೆದ ಹದಿನೈಂದು-ಇಪ್ಪತ್ತು ವರ್ಷಗಳಿಂದ ಪಟ್ಟಣದ ನಾಗರಿಕ ವಲಯದಲ್ಲಿ ನಿರಂತರವಾಗಿ ಈ ಎರಡು ರಸ್ತೆಗಳ ಅಗಲೀಕರಣಗಳದ್ದೆ ಚರ್ಚೆ ಆಗುತ್ತಿದೆ. ಆದರೆ, ಇದುವರೆವಿಗೂ ಈ ಕಾರ್ಯಕ್ಕೆ ಚಾಲನೆ ದೊರಕಿಲ್ಲ. ಸಾರ್ವಜನಿಕರ ಆಗ್ರಹವನ್ನು ಈಡೇರಿಸುವ ನಿಟ್ಟಿನಲ್ಲಿ 2010ರಲ್ಲಿ ಅಂದಿನ ಶಾಸಕ ಜಿ.ಎನ್.ನಂಜುಂಡಸ್ವಾಮಿ ಅವಧಿಯಲ್ಲಿ ಪ್ರಯತ್ನಿಸಲಾಗಿತ್ತು. ಆ ವೇಳೆ ಸ್ಥಳೀಯ ನಗರಸಭೆಯ ಅಧಿಕಾರಿಗಳು ರಸ್ತೆ ಅಗಲೀಕರಣ ಪ್ರಕ್ರಿಯೆಗೆ ಮುಂದಾಗಿದ್ದರು. ಕೊಳ್ಳೇಗಾಲದ ನೀಲಿನಕ್ಷೆಯು ತಮಿಳುನಾಡಿನ ಕೊಯಮತ್ತೂರಿನಲ್ಲಿ ಸಂಗ್ರಹವಾಗಿದ್ದರಿಂದ ಈ ಎರಡೂ ರಸ್ತೆಗಳ ಮಾಹಿತಿ ಪಡೆಯಲು ಕೊಯಮತ್ತೂರಿಗೆ ಅಧಿಕಾರಿಗಳು ತೆರಳಿದ್ದರು.

ನಂತರ ದಿನಗಳಲ್ಲಿ ಇದ್ದಕ್ಕಿದ್ದ ಹಾಗೆ ಈ ರಸ್ತೆಗಳ ಅಗಲೀಕರಣ ವಿಚಾರವೇ ಮರೆತು ಹೋಯಿತು. 2013ರಲ್ಲಿ ಶಾಸಕ ಎಸ್.ಜಯಣ್ಣ ಅವರ ಅವಧಿಯಲ್ಲಿ ಮತ್ತೆ ರಸ್ತೆಗಳ ಅಗಲೀಕರಣ ಮುನ್ನೆಲೆಗೆ ಬಂತು. ಈ ವೇಳೆ ರಸ್ತೆಗಳ ಅಗಲೀಕರಣದ ಸರ್ವೇ ಕಾರ್ಯ ನಡೆಸಲಾಯಿತು. ಅಗಲೀಕರಣಕ್ಕೆ ಅಗತ್ಯ ಅನುದಾನ ಹೊಂದಿಸಲು ಪ್ರಯತ್ನಿಸಿ, ಸಂಬಂಧಪಟ್ಟ ಪೌರಾಡಳಿತ ಇಲಾಖೆಯನ್ನು ಸಂಪರ್ಕಿಸಲಾಗಿತ್ತು. ಆದರೆ, ಸಂಬಂಧಪಟ್ಟ ಇಲಾಖೆ ಇದಕ್ಕೆ ಸ್ಪಂದಿಸಲಿಲ್ಲ. ನಗರಸಭೆಯಲ್ಲಿ ಇದಕ್ಕೆ ಬೇಕಾಗುವ ಸಂಪನ್ಮೂಲ ಕ್ರೋಡೀಕರಿಸಲು ಆಗದ ಪರಿಣಾಮ ಕೈಬಿಡಲಾಯಿತು.

2018ರಲ್ಲಿ ಶಾಸಕ ಎನ್.ಮಹೇಶ್ ಅವಧಿಯಲ್ಲಿ ಈ ವಿಚಾರ ಆಷ್ಟಾಗಿ ಪ್ರತಿಧ್ವನಿಸಲಿಲ್ಲ. ಆದರೆ, ಒಮ್ಮೆ ಮಾಧ್ಯಮದವರು ಪ್ರಸ್ತಾಪಿಸಿದಾಗ ಮಾಡುವ ಇಂಗಿತ ವ್ಯಕ್ತಪಡಿಸಿದರು. ಇದೀಗ ಎ.ಆರ್.ಕೃಷ್ಣಮೂರ್ತಿ ಅವರು ಶಾಸಕರಾದ ಕೂಡಲೇ ಪ್ರತಿಧ್ವನಿಸುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಈ ವಿಚಾರ ಸಂಚಲನ ಮೂಡಿಸಿದೆ.

ಭಾರಿ ಮೊತ್ತದ ಅನುದಾನ ಬೇಕು:
ಸುಮಾರು 1 ಕಿ.ಮೀ. ಅಂತರವಿರುವ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ರಾಜ್ ಕುಮಾರ್ ರಸ್ತೆಗಳು ಪಟ್ಟಣದ ಪ್ರಮುಖ ರಸ್ತೆಗಳಾಗಿವೆ. ರಸ್ತೆಗಳ ಇಕ್ಕೆಲಗಳಲ್ಲಿ ಪ್ರಮುಖ ವಾಣಿಜ್ಯ ಮಳಿಗೆಗಳಿದ್ದು, ದಿನ ನಿತ್ಯ ಲಕ್ಷಾಂತರ ರೂ. ವಹಿವಾಟು ನಡೆಯುತ್ತದೆ. ಈ ರಸ್ತೆಗಳ ಅಗಲೀಕರಣ ನಡೆದರೆ ಸಾಕಷ್ಟು ಅಂಗಡಿ, ಮಳಿಗೆಗಳನ್ನು ತೆರವುಗೊಳಿಸಬೇಕಾಗುತ್ತದೆ. ಈ ವೇಳೆ ಅಂಗಡಿ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ನೀಡಲು ಕೋಟ್ಯಂತರ ರೂ. ಅನುದಾನ ಬೇಕಾಗುತ್ತದೆ. ಅನುದಾನ ಕ್ರೋಡೀಕರಿಸಲು ನಗರಸಭೆಯಲ್ಲಿ ಸಂಪನ್ಮೂಲವಿಲ್ಲ. ಸರ್ಕಾರದ ಮಟ್ಟದಲ್ಲಿ ಅನುದಾನ ತರಬೇಕಾಗುತ್ತದೆ. ಆ ಕೆಲಸವನ್ನು ಸಂಬಂಧಪಟ್ಟ ಶಾಸಕರು ಮಾಡಬೇಕಿದೆ.

ನಗರದ ಅಭಿವೃದ್ಧಿಗೆ ಪೂರಕ:
ಕೊಳ್ಳೇಗಾಲ ನಗರ ದಿನೇ ದಿನೆ ಬೆಳೆಯುತ್ತಿದೆ. ಪಟ್ಟಣ ಪಂಚಾಯಿತಿಯಿಂದ ಪುರಸಭೆಗೆ, ನಂತರ ನಗರಸಭೆಯಾಗಿ ಮೇಲ್ದರ್ಜೆಗೇರಿದೆೆ. ಇದೀಗ ಸುಮಾರು 60 ರಿಂದ 70 ಸಾವಿರ ಜನಸಂಖ್ಯೆ ದಾಟಿದೆ. ಅಲ್ಲದೇ, ಪ್ರಮುಖ ವಾಣಿಜ್ಯ ಕೇಂದ್ರವಾಗಿರುವುದರಿಂದ ತಾಲೂಕಿನ ಗ್ರಾಮಾಂತರ ಪ್ರದೇಶಗಳ ಜನರಲ್ಲದೆ ಸುತ್ತಮುತ್ತಲಿನ ತಾಲೂಕು, ಜಿಲ್ಲೆಗಳ ಜನರು ಇಲ್ಲಿಗೆ ವ್ಯಾಪಾರಕ್ಕಾಗಿ ಬರುತ್ತಿದ್ದಾರೆ. ಇದರಿಂದ ಜನದಟ್ಟಣೆ ಹೆಚ್ಚಾಗಿ ಸಂಚಾರ ನಿಯಂತ್ರಣ ಬಿಗಿಡಾಯಿಸುತ್ತಿದೆ. ಇದ್ದರಿಂದ ಪೊಲೀಸ್ ಇಲಾಖೆಗೆ ಸಂಚಾರ ನಿಯಂತ್ರಣ ಸವಾಲಾಗಿ ಪರಿಣಮಿಸಿದೆ. ಅಂಬೇಡ್ಕರ್ ರಸ್ತೆಯಲ್ಲಿ ತಳ್ಳುಗಾಡಿಗಳ ಹಾವಳಿ ಹೆಚ್ಚಾಗಿರುವುದರಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಈ ಎಲ್ಲ ಸಾಧಕ-ಬಾಧಕಗಳ ದೃಷ್ಟಿಯಿಂದ ಕೊಳ್ಳೇಗಾಲದ ಎರಡೂ ಪ್ರಮುಖ ರಸ್ತೆಗಳ ಅಗಲೀಕರಣ ಅತ್ಯವಶ್ಯಕ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ನನ್ನ ಅವಧಿಯಲ್ಲಿ ರಸ್ತೆ ಅಗಲೀಕರಣ ಮಾಡುವ ಪ್ರಕ್ರಿಯೆಗೆ ಮುಂದಾಗಿದ್ದೆ. ಆದರೆ, ಅಗಲೀಕರಣ ವೇಳೆ ಪರಿಹಾರ ನೀಡಲು ಅನುದಾನ ಕ್ರೋಡೀಕರಿಸಲು ಸಾಧ್ಯವಾಗದ ಕಾರಣ ಕೈ ಬಿಡಲಾಯಿತು. ಪೌರಾಡಳಿತ ನಿರ್ದೇಶನಾಲಯದಿಂದಲೂ ಸ್ಪಂದನೆ ದೊರೆಯಲಿಲ್ಲ.-ಎಸ್.ಜಯಣ್ಣ, ಮಾಜಿ ಶಾಸಕ, ಕೊಳ್ಳೇಗಾಲ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ರಾಜ್‌ಕುಮಾರ್ ರಸ್ತೆ ಅಗಲೀಕರಣ ವಿಚಾರ ಸೂಕ್ಷ್ಮವಾಗಿದ್ದು, ಈ ಬಗ್ಗೆ ಆಲೋಚಿಸಿ ತೀರ್ಮಾನ ಕೈಗೊಳ್ಳಲು ಸ್ವಲ್ಪ ಕಾಲಾವಕಾಶ ಬೇಕಿದೆ.-ಎ.ಆರ್.ಕೃಷ್ಣಮೂರ್ತಿ, ಶಾಸಕ, ಕೊಳ್ಳೇಗಾಲ ಕೊಳ್ಳೇಗಾಲ ಹೃದಯ ಭಾಗದಲ್ಲಿ ಅಂಬೇಡ್ಕರ್ ಹಾಗೂ ಡಾ.ರಾಜ್‌ಕುಮಾರ್ ಈ ಎರಡೂ ಪ್ರಮುಖ ರ‌್ತಸೆಗಳು. ವಾಣಿಜ್ಯ ಕೇಂದ್ರವಾಗಿದೆ. ಕೆಲವು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದರೆ ಇದನ್ನು ತೆರವುಗೊಳಿಸಬೇಕು. ಜನಸಂದಣಿ ಹೆಚ್ಚಾದಂತೆ ಟ್ರಾಫಿಕ್ ಸಮಸ್ಯೆಯಾಗಿರುವುದರಿಂದ ರಸ್ತೆ ಅಗಲೀಕರಣ ಆಗಲೇಬೇಕು.-ದಿಲೀಪ್ ಸಿದ್ದಪ್ಪಾಜಿ, ಜಿಪಿ ಮಲ್ಲಪ್ಪಪುರಂ ನಿವಾಸಿ