ಕೊಳ್ಳೇಗಾಲ: ಪತ್ನಿ ಜತೆ ಜಗಳವಾಡಿಕೊಂಡು ಆಕೆಯ ಎದುರೇ ತಾಲೂಕಿನ ಸತ್ತೇಗಾಲ ಹ್ಯಾಂಡ್‌ಪೋಸ್ಟ್ ಸಮೀಪದ ಸೇತುವೆ ಬಳಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದವನನ್ನು ಗುರುವಾರ ಸಾರ್ವಜನಿಕರು ರಕ್ಷಿಸಿದ್ದಾರೆ.
ದೊಡ್ಡೇಬಾಗಿಲು ಗ್ರಾಮದ ನಿವಾಸಿ ಇಲಿಯಾಸ್ ಆತ್ಮಹತ್ಯೆಗೆ ಯತ್ನಿಸಿದಾತ. ಕೌಟುಂಬಿಕ ಕಲಹದಿಂದ ದಂಪತಿ ಆತ್ಮಹತ್ಯೆ ಮಾಡಿಕೊಳ್ಳಲು ಸತ್ತೇಗಾಲ ಹ್ಯಾಂಡ್‌ಪೋಸ್ಟ್ ಸಮೀಪ ಸೇತುವೆಗೆ ಬಳಿ ಬಂದಿದ್ದಾರೆ. ಈ ವೇಳೆ ಜಗಳವಾಡಿಕೊಂಡು ಪತಿ ಇಲಿಯಾಸ್ ಪ್ರವಾಹದ ನೀರಿಗೆ ಹಾರಿದ್ದಾನೆ. ಪರಿಣಾಮ ನೀರಿನ ರಭಸಕ್ಕೆ ಸ್ವಲ್ಪ ದೂರು ಕೊಚ್ಚಿ ಹೋಗಿದ್ದಾನೆ. ಈ ನಡುವೆ ಜೀವ ಉಳಿಸಿಕೊಳ್ಳಲು ತೇಗದ ಮರವನ್ನು ಹಿಡಿದುಕೊಂಡು ರಕ್ಷಿಸುವಂತೆ ಮನವಿ ಮಾಡಿದ್ದಾನೆ. ಸ್ಥಳೀಯರು ಅಗ್ನಿಶಾಮಕ ದಳಕ್ಕೂ ಮಾಹಿತಿ ನೀಡಿದ್ದಾರೆ. ಅಷ್ಟರಾಗಲೇ ತಡವಾಗುವ ಕಾರಣ ಸತ್ತೇಗಾಲ ಶಿವನಸಮುದ್ರ ನುರಿತ ಈಜುಗಾರರು ತೆಪ್ಪದ ಮೂಲಕ ಇಲಿಯಾಸ್‌ನನ್ನು ರಕ್ಷಿಸಿದ್ದಾರೆ.