ಕೊಳ್ಳೇಗಾಲ: ಪಟ್ಟಣದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ನೂತನ ಪದಾಧಿಕಾರಿಗಳಿಗೆ ಪದವಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಹಿರಿಯ ದಾನಿ ಪಿ.ಕೆ.ರಾಮಕೃಷ್ಣ ಅವರು ನೂತನ ಅಧ್ಯಕ್ಷೆ ಸರಸ್ವತಿ ಹೊನ್ನಪ್ಪ ಅವರಿಗೆ ಕಾಲರ್ ಧರಿಸುವ ಮೂಲಕ ಪದವಿ ಪ್ರದಾನ ಮಾಡಿದರು.
ಕಾರ್ಯದರ್ಶಿಯಾಗಿ ಜೋಸೆಫ್ ಇತರರು ಅಧಿಕಾರ ಸ್ವೀಕಾರ ಮಾಡಿದರು. ಹೊಸ ಸದಸ್ಯರಾಗಿ ಚಂದ್ರಮ್ಮ, ರಾಜೇಶ್ವರಿ ಸೇರ್ಪಡೆಗೊಂಡರು. ಈ ವೇಳೆ ಕೌದಳ್ಳಿ ಗ್ರಾಮದ ವೃದ್ಧಾಶ್ರಮಕ್ಕೆ 100 ಕೆ.ಜಿ ಅಕ್ಕಿ, ಬಟ್ಟೆ, ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ಮಾಡಲಾಯಿತು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು.
ಮುಖ್ಯಮಂತ್ರಿ ಪದಕ ವಿಜೇತ ಅರಣ್ಯ ಇಲಾಖೆ ಅಧಿಕಾರಿ ಅನಂತರಾಮು, ಕೆಎಸ್‌ಆರ್‌ಟಿ ಡಿಪೋ ಮಹಿಳಾ ಮೆಕಾನಿಕ್ ಕಲ್ಪನಾ ಅವರನ್ನು ಸನ್ಮಾನಿಸಲಾಯಿತು. ದಾನಿ ಪಿ.ಕೆ ಬಾಲಕೃಷ್ಣ ಮಾತನಾಡಿ, ರೋಟರಿ ಸಂಸ್ಥೆ ಸಮಾಜಮುಖಿ ಕಾರ್ಯಗಳನ್ನು ಮಾಡುವ ಧ್ಯೇಯ ಹೊಂದಿದೆ. ನೂತನ ಪದಾಧಿಕಾರಿಗಳ ತಂಡ ಸಮಾಜಸೇವೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಂಡು ಅಭಿವೃದ್ಧಿ ಚಟುವಟಿಕೆಗೆ ಪೂರಕವಾಗಬೇಕು ಎಂದರು. ವಲಯ ಸೇನಾನಿ ಜೋಸೆಫ್ ಮುತ್ತು ಕುಮಾರ್, ಉಪಾಧ್ಯಕ್ಷ ಮಹಾದೇವ, ಸಹಾಯಕ ಪ್ರಾಂತಪಾಲ ಗಿರೀಶ್ ಇದ್ದರು.