ಕೊಳ್ಳೇಗಾಲ: ವರದಕ್ಷಿಣಿ ಕಿರುಕುಳದಿಂದ ಬೇಸತ್ತು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದ ಗೃಹಿಣಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, ಈ ಸಂಬಂಧ ಆಕೆಯ ಗಂಡನನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ತಾಲೂಕಿನ ಹಳೇ ಹಂಪಾಪುರದ ಸುಜಾತಾ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಈಕೆಯ ಪತಿ ಇಂದ್ರಕುಮಾರ್ ಬಂಧಿತ ಆರೋಪಿ.
2018ರಲ್ಲಿ ಕುಣಗಳ್ಳಿ ಗ್ರಾಮದ ಸುಜಾತಾ ಎಂಬುವರನ್ನು ಇಂದ್ರಕುಮಾರ್ ವಿವಾಹವಾಗಿದ್ದ. ಈ ವೇಳೆ ವರದಕ್ಷಿಣೆಯಾಗಿ ಹೆಣ್ಣಿನ ಮನೆಯವರು 12 ಗ್ರಾಂ ಸರ, 5 ಗ್ರಾಂ ಉಂಗುರ ಹಾಗೂ ಬಟ್ಟೆಯನ್ನು ನೀಡಿದ್ದರು. 2 ವರ್ಷದ ಬಳಿಕ ಇಂದ್ರ ಕುಮಾರ್ ಸ್ವಲ್ಪ ಹಣ ಹಾಗೂ ಚಿನ್ನ ಬೇಕೆಂದು ಪೀಡಿಸಿ ಹಲ್ಲೆ ಮಾಡಿದ್ದ ಎನ್ನಲಾಗಿದೆ. ಈ ಕಿರುಕುಳಕ್ಕೆ ಬೇಸತ್ತು ಸುಜಾತಾ ಹಲವು ಬಾರಿ ತವರು ಮನೆಗೆ ಬಂದಿದ್ದಳು. ಈ ವೇಳೆ ಹಿರಿಯರು ಬುದ್ಧಿವಾದ ಹೇಳಿ ಸರಿಪಡಿಸಿದ್ದರು. ಸುಜಾತಾ ಗರ್ಭಿಣಿಯಾಗಿದ್ದಾಗ ಹೊಟ್ಟೆ ಮೇಲೆ ಒದ್ದು ಗರ್ಭಪಾತ ಆಗಿತ್ತು. ಇಷ್ಟೆಲ್ಲ ನಡೆದರೂ ಸುಜಾತಾ ಗಂಡನ ಮನೆಗೆ ಹೋಗಿದ್ದಳು. ಈ ನಡುವೆ ಮತ್ತೆ ಇಂದ್ರಕುಮಾರ್ 25 ಸಾವಿರ ರೂ. ಹಾಗೂ ಚಿನ್ನದ ಸರಕ್ಕೆ ಪೀಡಿಸಿದ್ದು, ಇದ್ದರಿಂದ ಮನನೊಂದ ಸುಜಾತಾ ಇಲಿ ಪಾಷಾಣ ಕುಡಿದು ಜು.4ರಂದು ಕೊಳ್ಳೇಗಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದರು. ನಂತರ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ವೈದ್ಯರು ಬದುಕುವುದು ಅನುಮಾನ ಎಂದು ಹೇಳಿ ದ್ದರಿಂದ ಬೇರೆ ಕಡೆ ಸೇರಿಸುವ ಸಲುವಾಗಿ ಜು.8ರಂದು ರಾತ್ರಿ 12.30 ರಲ್ಲಿ ಸುಜಾತಾಳನ್ನು ಹಳೇ ಹಂಪಾಪುರಕ್ಕೆ ಕರೆತಂದಿದ್ದು. ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾರೆ.
ಮೃತಳ ತಾಯಿ ತಾಯಮ್ಮ ನನ್ನ ಅಳಿಯ ನೀಡುತ್ತಿದ್ದ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಕಾನೂನು ಕ್ರಮ ವಹಿಸುವಂತೆ ಪಟ್ಟಣ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.