filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 46; 
ಜಿಲ್ಲೆ

ಅಧಿಕಾರಿಗಳ ವಿರುದ್ಧ ಸದಸ್ಯರ ಆಕ್ರೋಶ

ಕೊಳ್ಳೇಗಾಲ: ಇಲ್ಲಿನ ನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಅಧಿಕಾರಿಗಳ ಲೋಪ ದೋಷಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರಲ್ಲದೆ, ಜಿಲ್ಲಾಧಿಕಾರಿ, ಶಾಸಕರು, ಕೇಳಿದ ಪ್ರಶ್ನೋತ್ತರಗಳಿಗೆ ಉತ್ತರಿಸಲಾಗದೆ ತಡಬಡಿಸಿದರು.

ಶಾಸಕ ಎ.ಆರ್.ಕೃಷ್ಣಮೂರ್ತಿ ಉಪಸ್ಥಿತಿ, ಜಿಲ್ಲಾಧಿಕಾರಿ ಶಿಲ್ಪಾನಾಗ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಸಾರ್ವಜನಿಕವಾಗಿ ಆಗಬೇಕಾದ ವಿವಿಧ ಕಾಮಗಾರಿಗಳು, ನಗರಸಭೆಗೆ ಆದಾಯಕ್ಕೆ ಕುತ್ತು ತಂದಿರುವ ಜ್ವಲಂತ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು.

ಸಭೆ ಆರಂಭದಲ್ಲಿಯೇ ಸದಸ್ಯ ಧರಣೇಶ್ ಮಾತನಾಡಿ, 24*7 ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿ ಸಮರ್ಪಕವಾಗಿಲ್ಲ. ಕೆಲಸ ಮಾಡಿದವರು ಸಾಕಷ್ಟು ಲೋಪ ಎಸಗಿದ್ದಾರೆ. ನೂರಾರು ಮನೆಗಳಿಗೆ ಸಂಪರ್ಕ ನೀಡಿಲ್ಲ. ವಾಲ್‌ಗಳು ಕಳಪೆಯಾಗಿರುವುದರಿಂದ ತುಕು ಹಿಡಿದಿದೆ. ಜನವಸತಿ ಇಲ್ಲದ ಕಾಮಗಾರಿ ನಡೆಸಿ ನಿಯಮ ಉಲ್ಲಂಘಿಸಲಾಗಿದೆ ಎಂದು ದೂರಿದರು. ಇದಕ್ಕೆ ದನಿಗೂಡಿಸಿದ ಮನೋಹರ್, ನನ್ನ ಮನೆಗೆ ಅಳವಡಿಸಿರುವ ಮೀಟರ್ ಕಳಪೆ ಗುಣಮಟ್ಟದ್ದಾಗಿದೆ ಎಂದಾಗ, ಸದಸ್ಯರಾದ ಕವಿತಾ ರಾಜೇಶ್, ರಾಮಕೃಷ್ಣ, ಶಾಂತರಾಜು, ಸುಮ ಸುಬ್ಬಣ್ಣ, ಜಿ.ಪಿ.ಶಿವಕುಮಾರ್ ಕಾಮಗಾರಿ ಸಮರ್ಪಕ ರೀತಿ ಪೂರ್ಣಗೊಳಿಸಿಲ್ಲ ಎಂದು ಆರೋಪ ಮಾಡಿದರು.

ಕಾಮಗಾರಿ ನಿರ್ವಹಣೆಗೆ ನೇಮಿಸಲಾದ ತನಿಖಾ ಸಮಿತಿ ಸಮರ್ಪಕ ರೀತಿ ವರದಿ ನೀಡಿಲ್ಲ ಎಂದರೆ ಅಲ್ಲಿರುವ ಅಧಿಕಾರಿಗಳೇ ಹೊಣೆ ಹೊರಬೇಕಾಗುತ್ತದೆ. ಕಾಮಗಾರಿಯ ಲೋಪ ಸರಿಯಾಗಬೇಕು. ಸದಸ್ಯರ ದೂರನ್ನು ಗಂಭೀರವಾಗಿ ತೆಗೆದುಕೊಂಡು ಮರು ಪರಿಶೀಲಿಸಿ ಕೆಲಸ ಮಾಡಿ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಸೂಚನೆ ನೀಡಿದರು. ತಕ್ಷಣ ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ ಶಿಲ್ಪಾನಾಗ್, 1 ತಿಂಗಳೊಳಗೆ ಕಾಮಗಾರಿಗಳ ಲೋಪ ಸರಿಯಾಗಬೇಕು. ಯಾವುದೇ ದೂರು ಬರಬಾರದೆಂದು ನಗರಸಭೆ ಎಇಇ ಸುರೇಶ್ ,24*7 ಕುಡಿಯುವ ನೀರಿನ ಯೋಜನೆ ಎಇಇ ರಮೇಶ್ ಸೇರಿದಂತೆ ಇತರ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಸದಸ್ಯೆ ಕವಿತಾ ರಾಜೇಶ್ ಮಾತನಾಡಿ, 1ನೇ ವಾರ್ಡ್ ನಲ್ಲಿ ಮ್ಯಾನ್‌ಹೋಲ್ ಭರ್ತಿಯಾಗಿ ಕಲುಷಿತ ನೀರು ಹೊರ ಬರುತ್ತಿದೆ ಎಂದಾಗ ಹಲವು ಸದಸ್ಯರು ಪಟ್ಟಣದ ಹಲವಡೆ ಈ ಸಮಸ್ಯೆ ಇದೆ ಎಂದು ದನಿಗೂಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಎ.ಆರ್.ಕೃಷ್ಣಮೂರ್ತಿ, ಶಂಕನಪುರ, 1 ನೇ ವಾರ್ಡ್, ಉಪ್ಪಾರ ಮೋಳೆ ಬಡಾವಣೆಯಲ್ಲಿ ಬಾಕಿ ಉಳಿದಿರುವ ವೆಟ್‌ವೆಲ್ ಕಾಮಗಾರಿ ಜರೂರಾಗಿ ನಡೆಸಬೇಕೆಂದು ಯುಜಿಡಿ ಎಇಇ ಚಿನ್ನಸ್ವಾಮಿ ಅವರಿಗೆ ತಾಕೀತು ಮಾಡಿದರು. ನಂತರ, ಜಿಲ್ಲಾಧಿಕಾರಿ ಶಿಲ್ಪಾನಾಗ್ ಪ್ರತಿಕ್ರಿಯಿಸಿ, ನಗರಸಭೆ ವ್ಯಾಪ್ತಿಯ ವಾರ್ಡ್‌ಗಳ ಅಭಿವೃದ್ಧಿ ವೇಗ ನೀಡಬೇಕು. ಅಭಿವೃದ್ಧಿ ವಿಚಾರದಲ್ಲಿ ನನ್ನ ನಿರೀಕ್ಷೆ ಹೆಚ್ಚಿದೆ ಎಂದರು.

ಬಾಡಿಗೆ, ತೆರಿಗೆ ವಿಚಾರಕ್ಕೆ ಅಧಿಕಾರಿಗಳ ಬೆವರಿಳಿಸಿದ ಶಾಸಕ, ಡಿಸಿ:
ಸದಸ್ಯ ಜಿ.ಪಿ ಶಿವಕುಮಾರ್ ಮಾತನಾಡಿ, ಪಟ್ಟಣದ ಮಸೀದಿ ಬಳಿಯಲ್ಲಿ 2004ರಲ್ಲಿ ನಿರ್ಮಿಸಿದ ತರಕಾರಿ ಮಳಿಗೆಗಳು ಲೋಕಾರ್ಪಣೆಗೊಂಡಿಲ್ಲ. ಅನಧಿಕೃತವಾಗಿ ಕೆಲವರು ಮಳಿಗೆ ಬಳಸಿಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಈ ವಿಚಾರ ಕೋರ್ಟ್‌ನಲ್ಲಿದೆ ಎಂದು ಸಬೂಬು ಹೇಳುತ್ತಾರೆ. ಇದರಿಂದ ಈವರೆಗೂ 2 ಕೋಟಿ ರೂ. ಗೂ ಹೆಚ್ಚು ಆದಾಯ ನಷ್ಟವಾಗಿದೆ ಎಂದಾಗ, ಕೆಲವು ಸದಸ್ಯರು ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ ವಿರುದ್ಧ ಕಿಡಿಕಾರಿದರು.
ನ್ಯಾಯಾಲಯಕ್ಕೆ ನಗರಸಭೆಯಿಂದ ವಕೀಲರನ್ನು ನೇಮಿಸಿ ಜರೂರಾಗಿ ಪ್ರಕರಣ ಇತ್ಯರ್ಥ ವಾಗುವ ನಿಟ್ಟಿನಲ್ಲಿ ಪೌರಯುಕ್ತರು, ಆರ್.ಐ ಕೆಲಸ ಮಾಡಬೇಕೆಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಸೂಚಿಸಿದರು. ತಕ್ಷಣ ಮಧ್ಯ ಪ್ರವೇಶಿಸಿದ ನಗರಸಭೆ ಪೌರಯುಕ್ತ ಎ.ರಮೇಶ್ ಈ ಕಾರ್ಯ ಪ್ರಗತಿಯಲ್ಲಿದೆ ಎಂದರು.

ಇನ್ನು ಹಳೆ ನಗರಸಭೆ ಕಟ್ಟದಲ್ಲಿರುವ ಮಳಿಗೆಗಳ ಬಾಡಿಕೆ ವಸೂಲಿ ಮಾಡುತತಿಲ್ಲ ಎಂದು ಸದಸ್ಯರು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ, 15 ದಿನದಲ್ಲಿ ಮಳಿಗೆಗಳ ಬಾಡಿಗೆ ವಸೂಲಿ ಮಾಡಬೇಕು. ತಡೆಯಾಜ್ಞೆ ಇದ್ದಾಗಲೂ ಅಂಗಡಿ ಮಾಲೀಕರಿಂದ ಬಾಡಿಗೆ ಪಡೆಯಲು ಅಡ್ಡಿ ಇಲ್ಲ. ಮೂಲ ಬಾಡಿಗೆದಾರರು ಅಂತಹ ಮಳಿಗೆಗಳಲ್ಲಿ ವಹಿವಾಟು ನಡೆಸುತ್ತಿಲ್ಲ ಎಂದಾದರೆ ದಾಖಲೆ ಸಮೇತ ಅಂತಹ ಮಳಿಗೆಗಳನ್ನು ತಕ್ಷಣ ನಗರಸಭೆ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ನೈಜ ವರದಿ ನೀಡಲು ಕಟ್ಟುನಿಟ್ಟಿನ ಕ್ರಮವಹಿಸಿ. ಆದಾಯ ಬರುವ ವಿಚಾರದಲ್ಲಿ ನಿರ್ಲಕ್ಷ್ಯ ವಹಸಿ ನಗರಸಭೆಗೆ ನಷ್ಟ ಉಂಟು ಮಾಡಿದರೆ ಅಂತಹ ಅಧಿಕಾರಿಗಳ ಮೇಲೆ ದೂರು ನೀಡ ಬೇಕಾಗುತ್ತದೆ ಎಂದು ಖಡಕ್ ಸೂಚನೆ ನೀಡಿದರು.
ಮೀಟರ್ ನಲ್ಲಿಗೆ ದರ ಫಿಕ್ಸ್ : ನಗರಸಭೆಯ 31 ವಾರ್ಡ್‌ನಲ್ಲಿ ಮೀಟರ್ ನಲ್ಲಿಗಳಿಗೆ ದರ ನಿಗಧಿ ಮಾಡಲಾಗಿದೆ. 8ಸಾವಿರ ಲೀಟರ್‌ಗೆ 56 ರೂ. ಪಾವತಿಸಬೇಕು, 16 ಸಾವಿರ ಬಳಸಿದರೆ 112 ರೂ. ಕಟ್ಟಬೇಕೆಂದು ಸಭೆಯಲ್ಲಿ ನಿರ್ಣಯ ಮಾಡಲಾಯಿತು.

ಅನುದಾನ ಬಳಸಿಕೊಳ್ಳಲು ಸೂಚನೆ
ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಸರ್ಕಾರ 21 ವಾರ್ಡ್‌ಗಳಿಗೆ ತಲಾ 10 ಲಕ್ಷ ರೂ.ನಂತೆ 2.10 ಕೋಟಿ ರೂ.ಅನುದಾನ ನೀಡಿದೆ. ನಗರಸಭೆ ಇದನ್ನು ಸಮರ್ಪಕವಾಗಿ ಬಳಸಿಕೊಂಡು ನಿಗದಿತ ವೇಳೆಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು .ಜತೆಗೆ ಗುಣಮಟ್ಟ ಕಾಯ್ದುಕೊಳ್ಳಬೇಕು. ಕ್ರೀಯಾ ಯೋಜನೆ ನಂತರ ಟೆಂಡರ್ ವಿಳಂಬ ಮಾಡಬಾರದು ಎಂದರು.
ನಂಜಯ್ಯನ ಕಟ್ಟೆ ವಾಸಿಗಳಿಗೆ ಹಕ್ಕು ಪತ್ರ ನೀಡಿ
ನಗರಸಭೆ ಸದಸ್ಯ ಶಾಂತರಾಜು ಮಾತನಾಡಿ, ನಂಜಯ್ಯನಕಟ್ಟೆ ವಾಸಿಗಳಿಗೆ ಮೂಲ ಸೌಕರ್ಯ ಒದಗಿಸಲಾಗಿದೆ. ಆದರೆ, ಹಕ್ಕು ಪತ್ರ ನೀಡಿಲ್ಲ ಎಂದಾಗ, ಈ ಬಗ್ಗೆ ಪರಿಶೀಲಿಸಿ ಕ್ರಮವಹಿಸುವುದಾಗಿ ಶಾಸಕರು, ಡಿಸಿ ತಿಳಿಸಿದರು.
ಬಿಡಾಡಿ ದನಗಳು ಹಾಗೂ ಬೀದಿ ನಾಯಿಗಳ ಹಾವಳಿ ಬಗ್ಗೆ ಸಭೆಯಲ್ಲಿ ಸುಧೀರ್ಘವಾಗಿ ಚರ್ಚೆ ನಡೆಯಿತು. ಮುಡಿಗುಂಡ ಹಾಗೂ ಬಸ್ತೀಪುರ ಭಾಗದ ಜನರಿಗೆ ಹಕ್ಕು ಪತ್ರ ವಿತರಿಸುವ ನಿಟ್ಟಿನಲ್ಲಿ ಮುಂದಾಗಿ ಎಂದು ಶಾಸಕರು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು. ತಾಲೂಕು ಪಂಚಾಯಿತಿ ಆವರಣ ಹಾಗೂ ಗುರುಭವನ ಆವರಣದಲ್ಲಿ ಶೌಚಗೃಹ ನಿರ್ಮಾಣ ಕಾಮಗಾರಿಗೆ ಸಭೆ ತೀರ್ಮಾನಿಸಿತು. ಪಂಪ್ ಹೌಸ್‌ನಲ್ಲಿ ವಾಚ್‌ಮೆನ್ ಕೊಠಡಿಗೆ 35 ಲಕ್ಷ ರೂ.ಗಳ ಕ್ರೀಯಾ ಯೋಜನೆ ಸಿದ್ಧಪಡಿಸುವ ವಿಚಾರವಾಗಿ ಎಇಇ ಸುರೇಶ್ ಅವರನ್ನು ಶಾಸಕರು ತರಾಟೆಗೆ ತೆಗೆದುಕೊಂಡರು.
ಬಸ್ ನಿಲ್ದಾಣ ಪ್ರವೇಶ ದ್ವಾರ ದಲ್ಲಿರುವ ಆರ್‌ಒ ಫ್ಲಾಂಟ್ ಸ್ಥಳಾಂತರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ಸದಸ್ಯ ಪ್ರಕಾಶ್ ಶಂಕನಪುರ ಮಾತನಾಡಿ, ಶಂಕನಪುರ ಬಡಾವಣೆಗೆ ಆರ್‌ಒ ಫ್ಲಾಂಟ್ ಅಗತ್ಯವಿರುವ ಬಗ್ಗೆ ಪ್ರಸ್ತಾಪಿಸಿದರು. ಈ ಬಗ್ಗೆ ಶಾಸಕರು ಕ್ರಮ ವಹಿಸಿದ್ದೇನೆ ಎಂದರು. ನಗರಸಭೆ ಸದಸ್ಯರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.