filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.36629593, 0.5849477);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 39; 
ಜಿಲ್ಲೆ

ವಿಷಮುಕ್ತ ಬೆಳೆಗೆ ಮಾದಪ್ಪನ ಶ್ರಮ

ಕಿರಣ್ ಮಾದರಹಳ್ಳಿ

ಕೊಳ್ಳೇಗಾಲ; ಸಾವಯವ ಕೃಷಿ ಪದ್ಧತಿಯ ಬಗ್ಗೆ ಅತೀವ ಆಸಕ್ತಿ ಹೊಂದಿರುವ ರೈತ ಮಾದಪ್ಪ ಯೂಟ್ಯೂಬ್‌ನಲ್ಲಿ ಸಿಗುವ ಪ್ರಗತಿಪರ ರೈತರ ಮಾಹಿತಿ ನೋಡುತ್ತ, ಆ ಕ್ರಮಗಳನ್ನು ತಮ್ಮ ಜಮೀನಿನಲ್ಲಿ ಪ್ರಯೋಗ ಮಾಡುತ್ತ, ಮಾದರಿ ರೈತನಾಗಿ ಹೊರ ಹೊಮ್ಮಿದ್ದಾರೆ.

ತಾಲೂಕಿನ ಮುಳ್ಳೂರು ಗ್ರಾಮದ ಲೇಟ್ ಶಿವಪ್ಪ ಮತ್ತು ಲಲಿತಮ್ಮ ಅವರ ಮಗ ಮಾದಪ್ಪ ಆ ಮಾದರಿ ರೈತ. ತಂದೆ ಶಿವಪ್ಪ ಅವರು ತನ್ನ ಇಬ್ಬರು ಮಕ್ಕಳನ್ನು ಚೆನ್ನಾಗಿ ಓದಿಸುವ ಆಸೆ ಹೊಂದಿದ್ದರು. ಅದರಂತೆ ಮಾದಪ್ಪ ಮೈಸೂರಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮುಗಿಸಿದರು. ಕ್ರಮೇಣ ಶಿಕ್ಷಣದ ಬಗ್ಗೆ ಆಸಕ್ತಿ ಇಲ್ಲದೆ ಓದು ಮೊಟಕುಗೊಳಿಸಿದರು. ಇವರ ನಡೆಯನ್ನು ವಿರೋಧಿಸಿದ ಪಾಲಕರನ್ನು ಬಿಟ್ಟು ಬೆಂಗಳೂರಿನಲ್ಲಿ 7 ವರ್ಷಗಳ ಕಾಲ ಫ್ಯಾಕ್ಟರಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. 2000ನೇ ಇಸವಿಯಲ್ಲಿ ಮತ್ತೆ ಊರಿನತ್ತ ಮುಖ ಮಾಡಿ ತನ್ನ ತಂದೆ ಅವರ ವ್ಯವಸಾಯದ ಹಾದಿಯನ್ನೇ ಹಿಡಿದರು. ಸುಮಾರು 13 ವರ್ಷಗಳ ಕಾಲ ವ್ಯವಸಾಯ ಮಾಡಿದರೂ ಆರ್ಥಿಕವಾಗಿ ಅಭಿವೃದ್ಧಿಯಾಗಲು ಸಾಧ್ಯವಾಗಲಿಲ್ಲ. ಇದರಿಂದ ಬೇಸತ್ತು ಕೊಳ್ಳೇಗಾಲದ ರೈಸ್ ಮಿಲ್ ಒಂದರಲ್ಲಿ ರೈಟರ್ ಕೆಲಸಕ್ಕೆ ಸೇರಿಕೊಂಡರು. 6 ವರ್ಷ ಕಡಿಮೆ ಕೂಲಿಗೆ ಕೆಲಸ ಮಾಡಿದ ಇವರಿಗೆ ಜೀವನ ನಡೆಸುವುದೇ ಕಷ್ಟವಾಯಿತು.
ಅಷ್ಟರಾಗಲೇ ತಂದೆ ಕಾಲವಾದರು. ಇನ್ನು ಅಂಗೈಯಲ್ಲೇ ಚಿನ್ನ ಹಿಡಿದು ಊರೆಲ್ಲ ಅಲೆಯುವುದು ಸರಿಯಿಲ್ಲ ಎಂಬುದನ್ನು ಅರಿತ ಮಾದಪ್ಪ ಕೃಷಿಯಲ್ಲಿಯೇ ಮುನ್ನಡೆದು ಸಂಪಾದನೆ ಜತೆ ಹೆಸರನ್ನು ಗಳಿಸಬೇಕೆಂಬ ಉದ್ದೇಶದಿಂದ ಸಾವಯವ ಕೃಷಿ ಮಾಡಲು ಮುಂದಾದರು.
ಯೂಟ್ಯೂಬ್ ಚಾನಲ್‌ಗಳಲ್ಲಿ ಸಿಗುವ ಪ್ರಗತಿಪರ ಸಾವಯವ ಕೃಷಿಕರ ವಿಡಿಯೋಗಳಿಂದ ಪ್ರೇರಣೆಗೊಳಗಾಗಿ ತಮಗಿರುವ 5 ಎಕರೆ ಜಮೀನಿನಲ್ಲಿ 3 ಎಕರೆಯಲ್ಲಿ ವ್ಯವಸಾಯ ಮಾಡುತಿದ್ದಾರೆ. ಸಂಪೂರ್ಣವಾಗಿ ರಾಸಾಯನಿಕ ಪದ್ಧತಿಗೆ ಹೊಂದಿಕೊಂಡಿದ್ದ ಭೂಮಿಯನ್ನು ಇದೀಗ ಹಂತ ಹಂತವಾಗಿ ಸಾವಯವ ಪದ್ಧತಿಗೆ ಪರಿವರ್ತನೆ ಮಾಡಲು ಶ್ರಮಿಸುತ್ತಿದ್ದಾರೆ.
ಸಾವಯವ ಪದ್ಧತಿಯಲ್ಲಿ ಅರ್ಧ ಎಕರೆ ತೋಟ ಮಾಡಿದ್ದಾರೆ. 1 ಎಕರೆ 10 ಗುಂಟೆಯಲ್ಲಿ ಭತ್ತ, ಮೂಕ್ಕಾಲು ಎಕರೆಗೆ ಕಬ್ಬು ಹಾಕಿದ್ದಾರೆ. ಅಧರ್ ಎಕರೆಯಲ್ಲಿ ಬೆಂಡೆ, ಬದನೆ, ಬಾಳೆ, ಮರ ಗೆಣಸು ಬೆಳೆದು ಮಾರಾಟ ಮಾಡಿ ಲಾಭ ಪಡೆದಿದ್ದಾರೆ. ಇದೀಗ ಈ ಭೂಮಿಯಲ್ಲಿ ಸುಸ್ಥಿರ ಕೃಷಿ ಮಾಡಲು ಜಮೀನನ್ನು ಹದ ಮಾಡಿಕೊಂಡಿದ್ದಾರೆ. ಅಲ್ಲದೆ, 50 ತೆಂಗಿನ ಮರಗಳು, 30 ತೆಂಗಿನ ಸಸಿಗಳ ಪೋಷಣೆ ಮಾಡುತ್ತಿದ್ದಾರೆ.
ಬೆಳೆಗೆ ಗೋ ಕೃಪಾಮೃತ ಬಳಕೆ: 2 ಕೆ.ಜಿ. ಸುಣ್ಣದ ಬೆಲ್ಲ, 2 ಲೀ. ನಾಟಿ ಹಸುವಿನ ಮಜ್ಜಿಗೆ, 2ಲೀ. ಗೋಕೃಪಾಮೃತ ಹಾಕಿ ನೀರಿನಲ್ಲಿ ಬೆರೆಸಿ ಕೊಳೆಸುತ್ತಾರೆ. ಒಂದು ವಾರಗಳ ಕಾಲ ಬಿಡಲಿದ್ದು, ನಂತರ ಬೆಳೆಗೆ ನೀರು ಪೂರೈಸುವಾಗ ತಯಾರದ ಗೋ ಕೃಪಾಮೃತ ನೀಡುತ್ತಿದ್ದಾರೆ. ಇದ್ದರಿಂದ ಸೊರಗಿ ಹೋಗಿದ್ದ ತೆಂಗಿನ ಮರಗಳು ಚೇತರಿಸಿಕೊಂಡಿದ್ದು ಎಳನೀರು, ಕಾಯಿ ಹೆಚ್ಚಾಗಿ ಬಿಡುತ್ತಿವೆ. ಮಾದಪ್ಪ ಅವರ ಕೃಷಿ ಬದುಕಿಗೆ ಪತ್ನಿ, ಮಕ್ಕಳು ಸಾಥ್ ನೀಡುತ್ತಾರೆ.

ರಸ್ತೆಯಲ್ಲಿ ಬಿದ್ದಿರುವ ಸಗಣಿ ಶೇಖರಣೆ
ಆರ್ಥಿಕವಾಗಿ ಸುಸ್ಥಿತಿಯಲ್ಲಿ ಇರದ ಕಾರಣ ಮಾದಪ್ಪ ಹಸುಗಳನ್ನು ಸಾಕುವ ಆಸೆ ಇದ್ದರೂ ಖರೀದಿಸಲು ಸಾಧ್ಯವಾಗಿಲ್ಲ. ಇನ್ನು ಸಾವಯವ ಕೃಷಿಗಾಗಿ ನಿತ್ಯವು ಗ್ರಾಮದ ರಸ್ತೆಗಳಲ್ಲಿ ಹಸು, ಕರು, ಎತ್ತುಗಳು ಹಾಕಿ ಹೋಗಿರುವ ಸಗಣೆಯನ್ನು ಎತ್ತಿಕೊಂಡು ಜಮೀನಿನಲ್ಲಿ ಶೇಖರಣೆ ಮಾಡುತ್ತಾರೆ. ಸ್ನೇಹಿತರು ಸಾಕಿದ ಹಸುಗಳಿಂದ ಪಡೆದ ಗಂಜಲವನ್ನು ಬೇವಿನ ಸೊಪ್ಪು, ಎಕ್ಕದಗಿಡ ಮಿಶ್ರಗೊಳಿಸಿ ಭೂಮಿಯ ಫಲವತ್ತತೆಗೆ ನೀಡುತ್ತಿದ್ದಾರೆ. ಕಳೆ, ತ್ಯಾಜ್ಯಗಳನ್ನು ಜಮೀನಿನಲ್ಲಿ ಬಿಟ್ಟು ಕೊಳೆಯಿಸುತ್ತಾರೆ. ಇದನ್ನು ಕಂಡ ಅಕ್ಕಪಕ್ಕ ಜಮೀನಿನವರು ಜಮೀನಿನಲ್ಲಿ ತ್ಯಾಜ್ಯ, ಕಸ ನೋಡಿ ನಗುತ್ತ ಕಾಲೆಳೆದವರಿಗೆ ನೆಲ ನೋಡಬೇಡಿ, ಮೇಲಿನ ಫಲ ನೋಡಿ ಎಂದು ಖಡಕ್ ಉತ್ತರ ನೀಡುತ್ತಾರಂತೆ ಮಾದಪ್ಪ.

ಕೈಹಿಡಿದ ತೆಂಗಿನ ಕಾಯಿ:
ಸಾವಯವ ಕೃಷಿ ಪದ್ಧತಿಯಲ್ಲಿ ಖರ್ಚು ಕಡಿಮೆ ಎನ್ನುವ ಮಾದಪ್ಪ ಅವರು ಜಮೀನಿನಲ್ಲಿ ಕೂಲಿ ಕೆಲಸ ಮಾಡಲು ಕಾರ್ಮಿಕರನ್ನು ಬಳಸುವುದಿಲ್ಲ. ಬಹುಪಾಲು ಜಮೀನಿನ ಕೆಲಸವನ್ನು ತಾವೇ ಮಾಡಿಕೊಳ್ಳುತ್ತಾರೆ. ತಾವೇ ಮರ ಏರಿ ತೆಂಗಿನ ಕಾಯಿ ಕಿತ್ತು ಮಾರಾಟ ಮಾಡಿ ಕುಟುಂಬದ ಖರ್ಚನ್ನು ನಿಭಾಯಿಸುತ್ತಿದ್ದಾರೆ. ಕನಿಷ್ಠ ಬೆರಳೆಣಿಕೆ ಜನರಿಗಾದರೂ ವಿಷಮುಕ್ತ ಆಹಾರ ಒದಗಿಸಬೇಕೆಂಬ ಉದ್ದೇಶದಿಂದ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡು ನೆಮ್ಮದಿ ಕೃಷಿ ಬದುಕು ಸಾಗಿಸುತ್ತಿದ್ದಾರೆ.

ಸಾವಯವ ಕೃಷಿ ಮಾಡುವುದರಲ್ಲಿ ನನಗೆ ನೆಮ್ಮದಿ, ಖುಷಿ ಇದೆ. ಬೆರಳೆಣಿಕೆ ಜನರಿಗಷ್ಟಾದರೂ ವಿಷಮುಕ್ತ ಆಹಾರ ನೀಡಬೇಕೆಂಬ ಉದ್ದೇಶದ ನನ್ನದು. ಸಾವಯವ ಕೃಷಿಯಿಂದ ಭೂಮಿ ಉಳಿಯುತ್ತದೆ. ಮುಂದಿನ ಪೀಳಿಗೆಗೆ ಭೂಮಿ ಉಳಿಯ ಬೇಕಾದರೆ ಸಾವಯವ ಕೃಷಿ ಅನಿವಾರ್ಯವಾಗಿದೆ.ಮಾದಪ್ಪಸಾವಯವ ಕೃಷಿಕ, ಮುಳ್ಳೂರು ಗ್ರಾಮ.